ಪ್ರಮುಖ ಸುದ್ದಿಮೈಸೂರು

ದುಬೈನಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯರ ಅಕ್ರಮ ಸಾಗಣೆ..!

ಮೈಸೂರಿನಲ್ಲಿ ಇತ್ತೀಚಿಗೆ ಮಕ್ಕಳ ಮಾರಾಟ ಜಾಲವೊಂದು ಸಿಕ್ಕಿಬಿದ್ದು ಭಾರಿ ಸುದ್ದಿಯಾಗಿತ್ತು. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಮಹಿಳೆಯರ ಅಕ್ರಮ ಸಾಗಣೆ ದಂಧೆ ನಡೆಯುತ್ತಿದೆ ಎನ್ನುವ ಅಂಶಗಳು ಕೇಳಿಬರಲಾರಂಭಿಸಿವೆ.

ಸ್ಥಳೀಯ ಸಂಸ್ಥೆಯೊಂದು ದುಬೈನಲ್ಲಿ ಕೆಲಸ ಕೋಡಿಸುವ ನೆಪದಲ್ಲಿ ಮಹಿಳೆಯರನ್ನು ಮಾರಾಟ ಮಾಡಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಮಾರಾಟವಾಗಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬಾಕೆ ದುಬೈನಿಂದ ತಪ್ಪಿಸಿಕೊಂಡು ಬಂದಿದ್ದು. ಮತ್ತೊಬ್ಬಾಕೆ ನಾಪತ್ತೆಯಾಗಿದ್ದಾರೆ. ಸಂಸ್ಥೆಯೊಂದು ನಕಲಿ ವೀಸಾ ಬಳಸಿ ಮಹಾರಾಷ್ಟ್ರದ ಮೂಲಕ ಮಹಿಳೆಯರನ್ನು ದುಬೈಗೆ ಕಳುಹಿಸುತ್ತಿದ್ದು, ಮನೆ ಕೆಲಸ ಕೊಡಿಸುವ ನೆಪದಲ್ಲಿ ಲೈಂಗಿಕ ವ್ಯಾಪಾರಕ್ಕೆ ದೂಡುತ್ತಿದ್ದರು ಎಂಬ ವಿಷಯವೂ ಬಹಿರಂಗವಾಗಿದೆ.

ಈ ಪ್ರಕರಣ ಸಂಬಂಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ತನಿಖೆ ನಡೆಸಿದಾಗ ಸ್ಥಳೀಯ ಸಂಸ್ಥೆಯೊಂದು ಮನೆ ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯರನ್ನು ವಿದೇಶಕ್ಕೆ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಸುಭಾಷ್ ನಗರದಲ್ಲಿರುವ ಸಿದ್ದಿಕ್ ಟೂರ್ ಅಂಡ್ ಟ್ರಾವಲ್ಸ್ ಎಂಬ ಸಂಸ್ಥೆ ಸ್ಥಳೀಯ ಮಹಿಳೆಯರಿಗೆ ದುಬೈನಲ್ಲಿ ಹೆಚ್ಚಿನ ಸಂಬಳ ಸಿಗುವ ಮನೆ ಕೆಲಸ ಕೊಡಿಸುವ ಆಮೀಷ ಒಡ್ಡಿ ಅವರನ್ನು ಲೈಂಗಿಕ ವ್ಯಾಪಾರಕ್ಕೆ ಬಳಕೆ ಮಾಡಲಾಗುತ್ತಿತ್ತು ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಮೈಸೂರಿನ ರಾಜೀವ್ ನಗರದ ನಿವಾಸಿಯಾದ ಬಿ.ಬಿ. ಹಜೀರಾ ಎಂಬಾಕೆಯನ್ನು ಸಿದ್ದಿಕ್ ಸಂಸ್ಥೆಯ ಅಲ್ಮಾಸ್, ಸುಹೇಲ್ ಹಾಗೂ ಶಾಕೀಬ್ ಎಂಬವರು ದುಬೈನಲ್ಲಿ ಕೆಲಸಕ್ಕೆ ಕಳುಹಿಸಿದ್ದಾರೆ. ಬೆಂಗಳೂರಿನಿಂದ ದುಬೈಗೆ ತೆರಳುವ ಅವಕಾಶವಿದ್ದರೂ ಮಹಾರಾಷ್ಟ್ರದ ನಾಗಪುರದಿಂದ ದುಬೈಗೆ ಕಳುಹಿಸಿದ್ದಾರೆ. ಸಿದ್ದಿಕ್ ಸಂಸ್ಥೆ ಕಳುಹಿಸಿದ ಎಲ್ಲ ಮಹಿಳೆಯರಿಗೂ ನಕಲಿ ವೀಸಾದ ವ್ಯವಸ್ಥೆ ಸಹ ನೀಡಲಾಗಿತ್ತು. ಇದರಿಂದ ಏರ್‍ಪೋರ್ಟ್‍ ನಲ್ಲೇ ಸಿಕ್ಕಿಬಿದ್ದ ಹಜೀರಾರನ್ನು ದುಬೈ ಪೊಲೀಸರು ಬಂಧಿಸಿದ್ದರು. ನಂತರ ಅಲ್ಲಿಂದ ಇಂಡಿಯನ್ ಎಂಬೆಸ್ಸಿ ಮೂಲಕ ಭಾರತ ತಲುಪಿದ ಹಜೀರಾರನ್ನು ನಾಗಪುರದಲ್ಲಿ ಪೊಲೀಸರು ವಿಚಾರಣೆ ನಡೆಸಿ ಆಕೆಯ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪಾಸ್ ಪೋರ್ಟ್ ವಾಪಸ್ ಕೇಳಿದ್ದಕ್ಕೆ ನಿನ್ನನ್ನು ಇಲ್ಲಿಗೆ ಕಳುಹಿಸಿದ ಏಜೆಂಟ್ ರನ್ನು ಕರೆತಂದು ಪಾಸ್‍ಪೋರ್ಟ್‍ ಪಡೆದುಕೊಳ್ಳಿ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ದುಬೈನಿಂದ ತಪ್ಪಿಸಿಕೊಂಡು ಬಂದ ಹಜೀರಾ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಅಕ್ಟೋಬರ್ 23ರಂದು ಮೈಸೂರಿನಿಂದ ಹಜೀರಾ ಜೊತೆ ಗೌಹರ್ ಎಂಬಾಕೆಯನ್ನು ಕೂಡ ದುಬೈಗೆ ಕಳುಹಿಸಲಾಗಿತ್ತು. ಕೆಲ ದಿನಗಳ ಹಿಂದೆ ತನ್ನ ಮನೆಯವರಿಗೆ ಕರೆ ಮಾಡಿದ್ದ ಗೌಹರ್ ದುಬೈನಲ್ಲಿ ನಾನು ಎಲ್ಲಿದ್ದೀನೋ ಗೊತ್ತಿಲ್ಲ.  ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದು, ದಯಮಾಡಿ ವಾಪಸ್ ಕರೆಸಿಕೊಳ್ಳಿ ಎಂದು ಅಂಗಲಾಚಿದ್ದಾರೆ. ಆಕೆಯ ಕುಟುಂಬಸ್ಥರು ಗೌಹರ್ ಜೊತೆ ಪ್ರಯಾಣ ಬೆಳೆಸಿದ್ದ ಹಜೀರಾರನ್ನು ಸಂಪರ್ಕಿಸಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಉದಯಗಿರಿ ಠಾಣೆಯಲ್ಲಿ ದೂರು ನೀಡಿದ್ದು. ಸಿದ್ದಿಕ್ ಸಂಸ್ಥೆಯ ಮೂವರ ಮೇಲೆ ಎಫ್ ಐಆರ್ ದಾಖಲಾಗಿದೆ.

ಸಂತ್ರಸ್ತ ಮಹಿಳೆಯರು ಸರ್ಕಾರಕ್ಕೆ ಮನವಿ ಮಾಡಿದ್ದು,  ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಇದೊಂದು ಮಾನವ ಸಾಗಣೆ ಜಾಲಾವಾಗಿದ್ದು ಗುಪ್ತಚರ ಇಲಾಖೆ ಈ ಬಗ್ಗೆ ಗಮನ ವಹಿಸಿ ಕೆಲಸ ಮಾಡಬೇಕಿದೆ. ಸಂತ್ರಸ್ತ ಮಹಿಳೆಯರ ಸಹಾಯಕ್ಕೆ ಸರ್ಕಾರ ಬರಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಈ ಜಾಲ ಭೇದಿಸಲು ಮೈಸೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳೀಯ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದು,  ಇನ್ನು ಕೆಲವೇ ದಿನದಲ್ಲಿ ಪ್ರಕರಣಕ್ಕೆ ಇತಿಶ್ರೀ ಹಾಕುವ ಭರವಸೆ ನೀಡಿದ್ದಾರೆ.

ದುಬೈನಲ್ಲಿ ಕೈತುಂಬಾ ಸಂಪಾದಿಸುವ ಆಸೆಯಲ್ಲಿ ಮಹಿಳೆಯರು ತಮಗೆ ಅರಿವಿಲ್ಲದಂತೆ ಮಾರಾಟ ಜಾಲದ ಶಿಕಾರಿಗಳಾಗುತ್ತಿದ್ದಾರೆ. ನಕಲಿ ವೀಸಾ ಬಳಸಿ ಮಹಿಳೆಯರನ್ನು ವಿದೇಶಕ್ಕೆ ಕಳುಹಿಸುತ್ತಿದ್ದಾರೆ ಎಂದರೆ, ಈ ಮಾರಾಟ ಜಾಲದೊಳಗೆ ಇನ್ನಷ್ಟು ಮಹಿಳೆಯರು ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಮಹಿಳೆಯರು ಇನ್ನಾದರೂ ಎಚ್ಚೆತ್ತು ಯಾವುದೇ ರೀತಿಯ ಆಮೀಷಕ್ಕೊಳಗಾಗದೆ ಈ ರೀತಿಯ ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕಾದ ಅವಶ್ಯಕತೆಯಿದೆ.

ಸಂತೋಷ್ ಕೆ.

 

Leave a Reply

comments

Related Articles

error: