ಕರ್ನಾಟಕ

ಹಣದ ವಾಹನದೊಂದಿಗೆ ಚಾಲಕ ಪರಾರಿ ಪ್ರಕರಣ: ಚಾಲಕ ಡೊಮ್ನಿಕ್ ಬಂಧನ

ಬೆಂಗಳೂರು: ಹಣವಿದ್ದ ವಾಹನದೊಂದಿಗೆ ಚಾಲಕ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಡೊಮ್ನಿಕ್‍ನನ್ನು ಉಪ್ಪಾರಪೇಟೆ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡೊಮ್ನಿಕ್ ಸ್ನೇಹಿತನನ್ನು ಭೇಟಿಯಾಗಲು ಕೆ.ಆರ್. ಪುರಂ ಟಿನ್ ಫ್ಯಾಕ್ಟರಿ ಬಳಿ ಬಂದಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ಎಟಿಎಂ ಘಟಕಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಖಾಸಗಿ ಕಂಪನಿಯ ಚಾಲಕನಾಗಿದ್ದ ಡೊಮ್ನಿಕ್ ಕೆಲ ದಿನಗಳ ಹಿಂದೆ 1.37 ಕೋಟಿ ರೂ. ನೊಂದಿಗೆ ಪರಾರಿಯಾಗಿದ್ದ. ಪ್ರಕರಣ ಸಂಬಂಧ ಡೊಮ್ನಿಕ್ ಪತ್ನಿ ಎಲ್ವಿನ್‍ರನ್ನು ಈಗಾಗಲೇ ಬಂಧಿಸಲಾಗಿದ್ದು, ಆಕೆಯ ಬಳಿಯಿದ್ದ ಸುಮಾರು 79.8 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದರು.

ಕಾಕ್ಸ್‍ಟೌನ್ ರಸ್ತೆಯ ‘ಲಾಜಿ ಕ್ಯಾಷ್ ಮ್ಯಾನೇಜ್‍ಮೆಂಟ್ ಕಂಪನಿ’ಯು ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆಯನ್ನು ಪಡೆದಿದ್ದು, ಕಳೆದ ವಾರ ಕೆಜಿ ರಸ್ತೆಯಲ್ಲಿರುವ ವಿವಿಧ ಬ್ಯಾಂಕುಗಳಿಗೆ ಹಣ ತುಂಬಿಸಲು ಸಿಬ್ಬಂದಿಯನ್ನು ಕಳುಹಿಸಿತ್ತು. ಈ ವೇಳೆ ಚಾಲಕ ಡೊಮ್ನಿಕ್ 1.37 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದ. ಮರುದಿನ ಮೌಂಟ್‍ ಕಾರ್ಮೆಲ್ ಕಾಲೇಜು ಬಳಿ ವಾಹನ ಪತ್ತೆಯಾಗಿದ್ದು, ಅದರಲ್ಲಿ 45 ಲಕ್ಷ ರೂ. ಸಿಕ್ಕಿತ್ತು. ಉಳಿದ 92 ಲಕ್ಷ ರೂ.ನೊಂದಿಗೆ ಆತ ಪರಾರಿಯಾಗಿದ್ದ.

Leave a Reply

comments

Related Articles

error: