ಕರ್ನಾಟಕ

ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಘರ್ಷಣೆ

ರಾಜ್ಯ(ಮಂಡ್ಯ)ಮಾ.28:- ಕಳೆದ ಮಾ.24ರಂದು ಬಸವೇಶ್ವರ ದೇವಸ್ಥಾನ ನಿರ್ಮಾಣ ಮಾಡುವ ವಿಚಾರವಾಗಿ ತಾಲೂಕಿನ ಎಂ.ಬೆಟ್ಟಹಳ್ಳಿ ಗ್ರಾಮದಲ್ಲಿ ಒಂದೇ ಕೋಮಿನ ಎರಡು ಗುಂಪುಗಳಿಗೆ ನಡೆದ ಘರ್ಷಣೆಗೆ ಗ್ರಾಮದ ಜಗದೀಶ್, ಮಹದೇವಪ್ಪನವರೇ ನೇರಕಾರಣ ಎಂದು ಘಟನೆಯಲ್ಲಿ ಹಲ್ಲೆಗೊಳಗಾದ ವಾಟರ್‍ಮ್ಯಾನ್ ಶಿವಕುಮಾರ್ ತಿಳಿಸಿದ್ದಾರೆ.

ಜಗದೀಶ್ ತಮ್ಮ ವೈಯುಕ್ತಿಕ ದ್ವೇಷವನ್ನು ಬಸವೇಶ್ವರ ದೇವಸ್ಥಾನ ನಿರ್ಮಾಣದ ಕಮಿಟಿ ರಚಿಸುವ ವಿಚಾರದಲ್ಲಿ ಗೊಂದಲ ಸೃಷ್ಠಿಸಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆಯುವಲ್ಲಿ ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಜಗದೀಶ್ ಅವರು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರನ್ನು ಒಳ ಹಾಕಿಕೊಂಡು ಪಂಚಾಯಿತಿಯಿಂದ ಒಂದೇ ಕುಟುಂಬಕ್ಕೆ ಮೂರು ಆಶ್ರಯ ಮನೆ ಮಂಜೂರು ಮಾಡಿಸಿಕೊಂಡಿದ್ದರು. ಇದನ್ನು ನಮ್ಮ ಸಹೋದರ ಮಂಜುನಾಥ್ ಬಹಿರಂಗಪಡಿಸಿ ಆಶ್ರಯ ಮನೆಯ ಮಂಜೂರಾತಿಯನ್ನು ರದ್ದುಗೊಳಿಸಿದ್ದರು. ಇದರ ದ್ವೇಷವನ್ನು ಇಟ್ಟುಕೊಂಡು ಜಗದೀಶ್ ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಎಂ.ಬೆಟ್ಟಹಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇಗುಲ ನಿರ್ಮಾಣ ಮಾಡುವುದಕ್ಕಾಗಿ ಮುಜರಾಯಿ ಇಲಾಖೆಯಿಂದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯನವರು 12.50 ಹಣ ಮಂಜೂರು ಮಾಡಿಸಿದ್ದರು ಎಂದರು.

ದೇಗುಲ ನಿರ್ಮಾಣ ಮಾಡುವುದಕ್ಕೆ ಗ್ರಾಮದಲ್ಲಿ ಗ್ರಾಪಂ ಸದಸ್ಯರೊಬ್ಬರನ್ನು ಒಳಗೊಂಡಂತೆ ಕಮಿಟಿಯೊಂದನ್ನು ರಚಿಸಿಕೊಂಡು ದೇವಸ್ಥಾನ ನಿರ್ಮಾಣ ಮಾಡಲು ಶಾಸಕರ ಪತ್ನಿ ಸೂಚಿಸಿದ್ದರು. ಅದರಂತೆ ಜಗದೀಶ್, ಮಹದೇವಪ್ಪ ಅವರನ್ನು ಒಳಗೊಂಡಂತೆ 12 ಮಂದಿ ಕಮಿಟಿ ರಚಿಸಿದ್ದೆವು. ಇದಕ್ಕೆ ಜಗದೀಶ್, ಮಹದೇವಪ್ಪನವರು ಸಹ ಒಪ್ಪಿಗೆ ನೀಡಿದ್ದರು. ಆದರೆ, ಎರಡು ದಿನದ ನಂತರ ಮತ್ತೆ ಜಗದೀಶ್, ಮಹದೇಪ್ಪ ಈ ಕಮಿಟಿ ಸರಿಯಾಗಿಲ್ಲ ನಾವು ಹೇಳಿದವರನ್ನೇ ಕಮಿಟಿಗೆ ತೆಗೆದುಕೊಳ್ಳಬೇಕೆಂದು, ಕಮಿಟಿಗೆ ಕೇವಲ ರೈತಸಂಘದವರನ್ನೇ ಮಾತ್ರ ತೆಗೆದುಕೊಳ್ಳಬೇಕು ತಗಾದೆ ತೆಗೆದು ಗುಂಪುಕಟ್ಟಿಕೊಂಡು ಗಲಾಟೆಮಾಡಿಸಿದರು. ಗ್ರಾಮದಲ್ಲಿ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಗಲಾಟೆ ಬಿಡಿಸಲು ಹೋದ ನನ್ನ ಮೇಲೂ ಸಹ ದೊಣ್ಣೆಯಿಂದ ಕೈಗೆ ಹಲ್ಲೆ ನಡೆಸಿದರು. ಇದರಿಂದಾಗಿ ನನ್ನ ಎಡಭಾಗದ ಕೈಗೆ ಗಂಭೀರ ಗಾಯವಾಗಿದ್ದು ನಾನು ಪಾಂಡವಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದೇನೆ. ಜಗದೀಶ್, ಮಹದೇವಪ್ಪ ಅವರೇ ಗಲಾಟೆ ಮಾಡಿ ಉದ್ದೇಶಪೂರ್ವಕವಾಗಿ ಗಲಾಟೆಗೆ ಹೋಗದಿರುವ ವ್ಯಕ್ತಿಗಳ ಮೇಲೆ ಸುಳ್ಳುಕೇಸ್ ದಾಖಲಿಸಿದ್ದಾರೆ. ಗ್ರಾಮದಲ್ಲಿ ವಿನಾಕಾರಣ ಗಲಾಟೆ ಮಾಡಿಸುವ ಮೂಲಕ ಅಶಾಂತಿ ಸೃಷ್ಟಿಸುತ್ತಿರುವ ಜಗದೀಶ್, ಮಹದೇವಪ್ಪರ ಮೇಲೆ ಪೊಲೀಸ್ ಇಲಾಖೆ ಶಿಸ್ತು ಕ್ರಮಕೈಗೊಳ್ಳಬೇಕೆಂದು ಶಿವಕುಮಾರ್ ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: