ಮೈಸೂರು

ಎಸ್‍ಸಿ ಮತ್ತು ಎಸ್‍ಟಿ ಸಮುದಾಯಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ಬೆಂಬಲಿಸಿ: ಅಚ್ಚುತಾನಂದ

ಮೈಸೂರು,ಮಾ.28:-  ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಿದ್ದರಾಮಯ್ಯನವರನ್ನು ಅಹಿಂದ ಮುಖ್ಯಮಂತ್ರಿ ಎಂದು ಟೀಕಿಸುತ್ತಿದ್ದರೂ ಸಹ ಎಸ್‍ಸಿ ಮತ್ತು ಎಸ್‍ಟಿ ಸಮುದಾಯಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಜಿ.ಪಂ. ಸದಸ್ಯ ಅಚ್ಚುತಾನಂದ ಹೇಳಿದರು.

ಕೆ.ಆರ್.ನಗರ ಪಟ್ಟಣದ ಅಂಬಾಭವಾನಿ ಸಮುದಾಯ ಭವನದಲ್ಲಿ ನಿನ್ನೆ ಪರಿಶಿಷ್ಟ ಜಾತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಅಭಿವೃದ್ಧಿಗಾಗಿ ಸಾಕಷ್ಟು ಹಣ ಮೀಸಲಿಟ್ಟು ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಸಿದ್ದರಾಮಯ್ಯನವರು ತೋರುತ್ತಿರುವ ಕಾಳಜಿಯನ್ನು ಹಿಂದಿನ ಯಾವ ಮುಖ್ಯಮಂತ್ರಿಗಳು ವಹಿಸಿರಲಿಲ್ಲ ಎಂದರು.

ಸರ್ಕಾರಿ ಟೆಂಡರ್‍ನಲ್ಲಿ ಭಾಗವಹಿಸಿ ಕಾಮಗಾರಿ ಪಡೆದು ನಮ್ಮ ಸಮುದಾಯಗಳು ಆರ್ಥಿಕವಾಗಿ ಅಭಿವೃದ್ದಿ ಹೊಂದಲಿ ಎಂಬ ಕಾರಣದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಶೇ.50 ರಷ್ಟು ಮೀಸಲಾತಿ ತಂದಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮಗಳನ್ನು ತೆಲಂಗಾಣ ಸೇರಿದಂತೆ ಇತರ ರಾಜ್ಯಗಳು ಒಪ್ಪಿಕೊಂಡಿದ್ದಾರೆ. ಆದರೆ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರುಗಳು ಇದನ್ನು ವಿರೋಧಿಸುತ್ತಿರುವುದರಿಂದ ನಮ್ಮ ಸಮುದಾಯದವರು ಆ ಎರಡು ಪಕ್ಷಗಳಿಗೆ ಮತ ನೀಡಬಾರದು ಎಂದು ಮನವಿ ಮಾಡಿದರು.

ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟ್ಯಾಪ್ ಮತ್ತು ಬಸ್‍ಪಾಸ್ ವಿತರಿಸಿರುವುದಕ್ಕೆ ಕೆ.ಆರ್.ನಗರದ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು ಅವರ ಸಂಕುಚಿತ ಮನೋಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಅಚ್ಚುತಾನಂದ ನಾಲಾ ಆಧುನೀಕರಣ ಕಾಮಗಾರಿ ಕಮಿಷನ್ ಹಣದಿಂದ ತಲಾ ಒಂದು ಸಾವಿರ ರೂಗಳನ್ನು ಮಹಿಳೆಯರಿಗೆ ವಿತರಿಸುತ್ತಿದ್ದು, ಇದು ಸಾರ್ವಜನಿಕರ ತೆರಿಗೆ ಹಣವಾಗಿದೆ ಹಾಗಾಗಿ ಶಾಸಕರ ಋಣ ತೀರಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

5 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಯಾವುದೇ ಹಗರಣ ಮತ್ತು ಭ್ರಷ್ಟಾಚಾರ ಆರೋಪವಿಲ್ಲದೆ ಜನಪರವಾದ ಉತ್ತಮ ಆಡಳಿತ ನೀಡಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿದ್ದು ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ತಾಲೂಕಿನ ಸಮಗ್ರ ಅಭಿವೃದ್ದಿಗಾಗಿ ಡಿ.ರವಿಶಂಕರ್ ಅವರನ್ನು ಆಯ್ಕೆ ಮಾಡಬೇಕೆಂದು ಕೋರಿದರು.

ಶಾಸಕರಾದವರು ತಾಲೂಕಿನ ಸಮಸ್ತ ಜನತೆಯನ್ನು ರಕ್ಷಣೆ ಮಾಡಬೇಕು, ನಾನು ಸಭೆ ಸಮಾರಂಭಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡುವಾಗ ಶಾಸಕರನ್ನು ವಿರೋಧ ಮಾಡುತ್ತೇನೆ ಎಂಬ ಕಾರಣಕ್ಕಾಗಿ ಸಾ.ರಾ.ಮಹೇಶ್ ನಮ್ಮ ಸಮಾಜದ ಜೆಡಿಎಸ್ ಮುಖಂಡರ ಬಳಿ ಇಲ್ಲಸಲ್ಲದ್ದನ್ನು ಹೇಳಿದ್ದಾರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದ ಅಚ್ಚುತಾನಂದ ಇಂತಹಾ ದಲಿತ ವಿರೋಧಿ ಶಾಸಕರನ್ನು ಸಮಾಜದ ಬಾಂಧವರು ಬೆಂಬಲಿಸಬಾರದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಜಿ.ಪಂ. ಮಾಜಿ ಸದಸ್ಯ ರಾಜಯ್ಯ, ತಾ.ಪಂ. ಮಾಜಿ ಸದಸ್ಯ ಎಂ. ತಮ್ಮಣ್ಣ, ಟಿಎಪಿಸಿಎಂಎಸ್ ನಿರ್ದೇಶಕ ಜಿ.ಡಿ.ಚೆಲುವರಾಜು, ಮಾತನಾಡಿದರು. ದಲಿತ ಮುಖಂಡರಾದ ಸಂಪತ್, ರಾಚಯ್ಯ, ಸಾ.ಮಾ.ಯೋಗೀಶ್, ನಿಂಗರಾಜು, ಜಲ್ಲಿಮಂಜು, ಕೋಳಿಕುಮಾರ್, ವೆಂಕಟೇಶ್, ಬಾಲಕೃಷ್ಣ, ಶಿವಕುಮಾರ್, ಮಹಾಲಿಂಗ ಇದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: