ದೇಶಪ್ರಮುಖ ಸುದ್ದಿ

ಕಪ್ಪುಹಣ ಬಿಳಿ ಮಾಡಿಕೊಳ್ಳಲು ಶೇ.50 ತೆರಿಗೆ: ಘೋಷಿಸದಿದ್ದಲ್ಲಿ ಶೇ.85 ತೆರಿಗೆ, ದಂಡ

ಕಾಳಧನಿಕರಿಗೆ ಕೇಂದ್ರ ಸರಕಾರವು ಮತ್ತೊಂದು ಅವಕಾಶವನ್ನು ನೀಡಿದ್ದು, ಕಪ್ಪು ಹಣಕ್ಕೆ ಶೇ.50 ತೆರಿಗೆ ಕಟ್ಟಿ ಬಿಳಿ ಮಾಡಿಕೊಳ್ಳಲು ಹೊಸ ಕಾನೂನು ಜಾರಿಗೆ ತರುತ್ತಿದೆ. ಇದರ ನಂತರವೂ ಕಪ್ಪು ಹಣವನ್ನು ಘೋಷಿಸಿಕೊಳ್ಳದೆ ಹಣದೊಂದಿಗೆ ಸಿಕ್ಕಬಿದ್ದರೆ ಶೇ.85ರಷ್ಟು ತೆರಿಗೆ ಹಾಗೂ ದಂಡ ಕಟ್ಟಬೇಕಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು 1000 ರು. ನೋಟು ರದ್ದುಗೊಳಿಸಿದ ಮೂರು ವಾರಗಳ ನಂತರ ವಿತ್ತ ಸಚಿವ ಅರುಣ್‍ ಜೇಟ್ಲಿ ಅವರು ಆದಾಯ ತೆರಿಗೆ ಕಾಯಿದೆಯ ತಿದ್ದುಪಡಿ ಮಸೂದೆಯನ್ನು ಸೋಮವಾರದಂದು ಸಂಸತ್ತಿನಲ್ಲಿ ಮಂಡಿಸಿದರು.

ಕಪ್ಪು ಕುಳಗಳು ಘೋಷಿಸುವ ಹಣದ ಶೇ.25ರಷ್ಟನ್ನು ಬಡತನ ನಿಗ್ರಹ ಯೋಜನೆಗಳಡಿ ಕಡ್ಡಾಯವಾಗಿ, ನಿಬಡ್ಡಿಯಾಗಿ ಮತ್ತು ನಾಲ್ಕು ವರ್ಷಗಳ ಅವಧಿಯ ಬೀಗಮುದ್ರೆಗೆ ಒಳಪಡುವ, ನಿರ್ಬಂಧಗಳನ್ನು ಈ ತಿದ್ದುಪಡಿಯಲ್ಲಿ ಕಲ್ಪಿಸಲಾಗಿದೆ.

2016ರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ತಮ್ಮ ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಪಾವತಿಸಬೇಕಾಗುವುದು.

ಕಪ್ಪುಹಣವನ್ನು ಘೋಷಿಸಿಕೊಳ್ಳದ ಕಾಳಧನಿಕರು ಶೇ.60 ತೆರಿಗೆ ಮತ್ತು ಶೇ.25 ತೆರಿಗೆ ಮೇಲಿನ ಸರ್ಚಾರ್ಜ್‌ (ಶೇ.15ರ ಪ್ರಮಾಣದಲ್ಲಿ) ಪಾವತಿಸಬೇಕಾಗುವುದು ಮತ್ತು ಇದು ಒಟ್ಟಾಗಿ ಶೇ.75 ಆಗುವುದು. ಇದರ ಜತೆಗೆ ಒಂದೊಮ್ಮೆ ಅಸೆಸಿಂಗ್‌ ಅಧಿಕಾರಿಯು ತಪ್ಪುಗಾರ ಕಾಳಧನಿಕನಿಗೆ ಶೇ.10ರ ಹೆಚ್ಚುವರಿ ದಂಡ ವಿಧಿಸಬಹುದಾಗಿದೆ ಎಂದು ತೀರ್ಮಾನಿಸಿದಲ್ಲಿ, ಶೇ.75 ತೆರಿಗೆಗೆ ಹೆಚ್ಚುವರಿಯಾಗಿ ಅದನ್ನು ಪಾವತಿಸಬೇಕಾಗುವುದು.

 

Leave a Reply

comments

Related Articles

error: