ಕರ್ನಾಟಕ

ನೀತಿ ಸಂಹಿತೆ ಜಾರಿ ಚುರುಕುಗೊಳಿಸಲು ಡಾ.ಜಗದೀಶ್ ಸೂಚನೆ

ಹಾಸನ (ಮಾ.29): ಮಾ.27 ರಂದು ಚುನಾವಣಾ ವೇಳಾ ಪಟ್ಟಿ ಪ್ರಕಟವಾಗಿದ್ದು. ಮಾದರಿ ನೀತಿ ಸಂಹಿತೆಯು ಜಿಲ್ಲೆಯಾದ್ಯಂತ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಕ್ರಮಗಳನ್ನು ಚುರುಕುಗೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಡಾ.ಜಗದೀಶ್ ಅವರು ಸೂಚನೆ ನೀಡಿದರು.

ಎಲ್ಲಾ ಜಿಲ್ಲೆಗಳ ಮಾದರಿ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿಗಳೊಂದಿಗೆ ಬುಧವಾರ ವೀಡಿಯೋ ಸಂವಾದ ನಡೆಸಿದ ಅವರು, ಚುನಾವಣಾ ಅಕ್ರಮಗಳ ತಡೆ ಚಟುವಟಿಕೆಗಳು ತೀಕ್ಷಣಗೊಳ್ಳಬೇಕು ಎಂದರು.

ಬೆಳಗ್ಗೆ 10 ರಿಂದ ಸಂಜೆವರೆಗೂ ಚುನಾವಣೆ ನೀತಿ ಸಂಹಿತೆ ಜಾರಿ ಕುರಿತು ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಗಳನ್ನು ನೀಡಿದರು. ಈಗಿನಿಂದ ನಾಮಪತ್ರ ಸಲ್ಲಿಕೆಯಾಗುವವರೆಗೆ ನಡೆವ ರಾಜಕೀಯ ಸಭೆ ಸಮಾರಂಭದ ಖರ್ಚುವೆಚ್ಚ ಪಕ್ಷದ ಖರ್ಚಿನ ಲೆಕ್ಕದ ಖಾತೆಗೆ ತೆಗೆದುಕೊಳ್ಳಬೇಕು, ಪ್ರತಿಯೊಬ್ಬರೂ ಕಾರ್ಯಕ್ರಮ ರ್ಯಾಲಿಗಳ ಖರ್ಚು ವೆಚ್ಚದ ಬಗ್ಗೆ ತೀವ್ರ ನಿಗಾವಹಿಸಬೇಕು ಎಲ್ಲಾವನ್ನೂ ವಿಡಿಯೋ ದಾಖಲೆಗಳ ತಂಡ ದಾಖಲಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಅಭ್ಯರ್ಥಿಗಳ ಲೆಕ್ಕ ಪತ್ರ ನಿರ್ವಹಣೆ, ಖರ್ಚುವೆಚ್ಚ ಸ್ಟಾರ್ ಪ್ರಚಾರಕರು ಬಂದಾಗ ಲೆಕ್ಕದ ವಿವರಗಳನ್ನು ಯಾರ ಖಾತೆಗೆ ತೆಗೆದುಕೊಳ್ಳಬೇಕು, ವಾಹನ ಬಳಕೆಗಳಿಗೆ ಇರುವ ಇತಿಮಿತಿ ನಿಯಮಾವಳಿಗಳ ಬಗ್ಗೆ ಅವರು ವಿವರಿಸಿದರು.

ಮಾಧ್ಯಮ ದೃಢೀಕರಣ ಮತ್ತು ನಿಗಾ ಸಮಿತಿ ದೃಶ್ಯ, ಶ್ರವ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಗೊಳ್ಳುವ ಜಾಹಿರಾತುಗಳನ್ನು ಹೇಗೆ ಯಾವ ಯಾವ ಲೆಕ್ಕಕ್ಕೆ ಹಾಕಬೇಕು, ಮಾಧ್ಯಮ ಜಾಹೀರಾತುಗಳ ಪ್ರಕಟ ಪೂರ್ವ ದೃಢೀಕರಣ ವ್ಯವಸ್ಥೆಗಳು ಹೇಗೆ, ಪಾವತಿ ಸುದ್ದಿಯನ್ನು ಯಾವರೀತಿಯಲ್ಲಿ ಪರಿಗಣಿಸಿ ಅಭ್ಯರ್ಥಿಗಳ ವೆಚ್ಚದ ನೆಳಲುವಹಿಸಿ ದಾಖಲಿಸಬೇಕು ಎಂಬುದನ್ನು ಡಾ.ಜಗದೀಶ್ ಅವರು ವಿವರಿಸಿದರು.

ಪ್ರತಿಯೊಬ್ಬ ಅಭ್ಯರ್ಥಿ ನಾಮ ಪತ್ರ ಸಲ್ಲಿಕೆ ವೇಳೆ ತಮ್ಮ ಸಾಮಾಜಿಕ ಜಾಲ ತಾಣಗಳ ಖಾತೆಗಳ ವಿವರಗಳನ್ನು ಒದಗಿಸಬೇಕು ಜಾಹಿರಾತುಗಳಿಗೆ ಕ್ರಿಯೇಟಿವ್‍ಗಳ ತಯಾರಿಕಾ ವೆಚ್ಚ ಖಾತೆಗಳ ನಿರ್ವಹಣೆ ಮಾಡುವುದರ ಸಂಭಾವನೆ ಮತ್ತು ಜಾಲತಾಣಗಳ ವೆಚ್ಚಗಳನ್ನು ಅಭ್ಯರ್ಥಿಗಳ ವೆಚ್ಚದ ಖಾತೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಾ.ಜಗದೀಶ್ ಅವರು ವಿವರಿಸಿದರು.

ವೀಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಎಂ ಜಾನಕಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಉಪ ವಿಭಾಗಾಧಿಕಾರಿಗಳಾದ ಡಾ. ಹೆಚ್.ಎಲ್.ನಾಗರಾಜ್, ಲಕ್ಷ್ಮೀಕಾಂತ್ ರೆಡ್ಡಿ, ವಿಶೇಷ ಭೂಸ್ವಾಧೀನಾಧಿಕಾರಿ ಬಿ.ಎ ಜಗದೀಶ್, ವಿವಿಧ ತಾಲ್ಲೂಕು ತಹಸೀಲ್ದಾರ್‍ಗಳು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.(ಎನ್.ಬಿ)

Leave a Reply

comments

Related Articles

error: