ಮೈಸೂರು

ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ : ಜಯಪ್ರಕಾಶ್ ಸಲಹೆ

ಕಲೆ, ಸಾಹಿತ್ಯ, ಸಾಂಸ್ಕೃತಿಕ  ಚಟುವಟಿಕೆಗಳಿಂದ ಮನುಷ್ಯ ಪರಿಪೂರ್ಣ ವ್ಯಕ್ತಿಯಾಗಲಿದ್ದು ಯುವಕರು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಿಕ  ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್ ಸಲಹೆ ನೀಡಿದರು.

ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಮಹಾಜನ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮೈಸೂರಿನ ಮಹಾಜನ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಹಾಗೂ ಸಹ ಪಠ್ಯೇತರ ಚಟುವಟಿಕೆಗಳ ಸಮಾರಂಭವನ್ನು  ಜಯಪ್ರಕಾಶ್ ಉದ್ಘಾಟಿಸಿದರು. ಬಳಿಕ  ಮಾತನಾಡಿದ ಅವರು,  ಆದಿ ಮಾನವನಿಂದ ಆಧುನಿಕ ಮಾನವನವರೆಗೆ ಕಲೆ ಹಾಸು ಹೊಕ್ಕಾಗಿದೆ. ದೈನಂದಿನ ಜೀವನದಲ್ಲಿ ನಡೆದ ಘಟನೆಗಳಿಂದ ಪ್ರೇರಿತನಾಗಿ ಆದಿ ಮಾನವ ಕಲೆಯನ್ನು ಕಂಡು ಹಿಡಿದ. ಅವುಗಳೇ ಇಂದು ನಾನಾ ಪ್ರಕಾರದ ಕಲೆಗಳಾಗಿ ರೂಪುಗೊಂಡಿವೆ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯ ಸುಪ್ತ ಪ್ರತಿಭೆ ಇದ್ದು ಅವುಗಳ ಅನಾವರಣಕ್ಕೆ ಸಿಗುವ ಇಂತಹ ವೇದಿಕೆಗಳನ್ನು ಸದ್ವಿನಿಯೋಗ ಮಾಡಿಕೊಂಡು ಮೇಲ್ಮಟ್ಟಕ್ಕೆ ಏರಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ವಿದಾರ್ಥಿಗಳ ಶಿಕ್ಷಣ ಜೀವನದಲ್ಲಿ ಪಿಯುಸಿ ಬಹಳ ಮಹತ್ವದ, ಭವಿಷ್ಯದ ಬಾಳಿಗೆ ತಿರುವು ನೀಡುವ ಹಂತ. ಈ ಹಂತದಲ್ಲಿ ವಿದ್ಯಾರ್ಥಿಗಳು ಮೈ ಮರೆಯಬಾರದು. ಪೋಷಕರು ನಿಮ್ಮ ಮೇಲಿಟ್ಟಿರುವ ಹೊಂಗಸನನ್ನು ನುಚ್ಚುನೂರು ಮಾಡದೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಪಟ್ಟು ಓದಬೇಕು. ವಿಜ್ಞಾನ, ಕಲಾವಿಭಾಗ, ವಾಣಿಜ್ಯ ಎಂದು ಭೇದಭಾವ ತೋರದೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಕೋರ್ಸ್ ಆಯ್ಕೆ ಮಾಡಿಕೊಂಡು ಅದರಲ್ಲೇ ಸಾಧನೆ ಮಾಡಬೇಕು. ನಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳದೆ ಸದಾ ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಕನ್ನಡ ಭಾಷೆ ವಿಶ್ವದ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸ್ಪರ್ಧೆಯಲ್ಲಿ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ, ರಸಪ್ರಶ್ನೆ ಸ್ಪರ್ಧೆ, ಚರ್ಚಾ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪ್ರಬಂಧ ರಚನೆ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ವಿವಿಧ ಪದವಿಪೂರ್ವ ಕಾಲೇಜುಗಳ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ವಾಸುದೇವಮೂರ್ತಿ, ಪ್ರಾಂಶುಪಾಲ ಶಿವಪ್ಪ, ಮಹೇಶ್, ರಾಜೇಶ್ವರಿ, ಬಾಲಸುಬ್ರಹ್ಮಣ್ಯಂ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: