ಮೈಸೂರು

ಸಾಹಿತಿಗಳಲ್ಲದವರಿಂದಲೂ ಕನ್ನಡ ಬೆಳೆಯುತ್ತಿದೆ : ಪ್ರೊ.ನಿರಂಜನ ವಾನಳ್ಳಿ

ಕನ್ನಡವನ್ನು ಬೆಳೆಸುತ್ತಿರುವವರು ಕೇವಲ ಸಾಹಿತಿಗಳು ಮಾತ್ರವಲ್ಲ, ಸಾಹಿತಿಗಳಲ್ಲದವರೂ ಸಹ ಕನ್ನಡವನ್ನು ಉಳಿಸಿ, ಬೆಳೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ನಿರಂಜನ್ ವಾನಳ್ಳಿ ತಿಳಿಸಿದರು.

ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಮಂಗಳವಾರ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ 6ನೇ ಕನ್ನಡ ರಾಜ್ಯೋತ್ಸವವನ್ನು ಕನ್ನಡಾಂಬೆಗೆ ಪುಷ್ಪಾರ್ಚನೆಗೈದು, ದೀಪ ಬೆಳಗಿಸುವ ಮೂಲಕ ನಿರಂಜನ ವಾನಳ್ಳಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಲ್ಲರೂ ಕನ್ನಡ ಬೆಳೆಸುತ್ತಿರುವವರು ಕೇವಲ ಸಾಹಿತಿಗಳು ಅಂತ ತಿಳಿದುಕೊಂಡಿದ್ದಾರೆ. ಆದರೆ ಸಾಹಿತಿಗಳಲ್ಲದವರೂ ಕನ್ನಡವನ್ನು ಬೆಳೆಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಥಹವರಿಂದಲೇ ಇಂದು ಕನ್ನಡ ಉಳಿದುಕೊಂಡಿದೆ ಎಂದರು.

ಪ್ರವಾಸಿ ವಾಹನ ಚಾಲಕರು ಬೇರೆಡೆಯಿಂದ ಬರುವ ಜನರಿಗೆ ಕನ್ನಡವನ್ನು ಕಲಿಸುವ, ಕನ್ನಡದಲ್ಲಿಯೇ ವಿವರಣೆಗಳನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಇಷ್ಟಪಟ್ಟರೆ ಕನ್ನಡ ಬೆಳೆಸಲೂಬಹುದು. ಕನ್ನಡವನ್ನು ಅಳಿಸಲೂಬಹುದು ಎಂದರು.  ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅದನ್ನು ಉಳಿಸಿಬೆಳೆಸಿಕೊಂಡು ಹೋಗುವ ಕೆಲಸವಾಗಬೇಕು. ಇಂದಿನ ಮಕ್ಕಳಿಗೆ ಕನ್ನಡವೆಂದರೆ ಅಸಡ್ಡೆ. ಆದರೆ ಅವರಲ್ಲಿಯೂ ಕನ್ನಡಾಭಿಮಾನವನ್ನು ಬೆಳೆಸುವ ಕಾರ್ಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ 2017ರ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಜೆಡಿಎಸ್ ಮುಖಂಡ ಹರೀಶ್ ಗೌಡ, ಎಂ.ಡಿ.ಟಿ.ವಿ.ಡಿ.ಒ.ಡಬ್ಲ್ಯೂ.ಎ ಗೌರವಾಧ್ಯಕ್ಷ ಬಿ.ಎಸ್.ಪ್ರಶಾಂತ್, ಎಂ.ಡಿ.ಟಿ.ವಿ.ಡಿ.ಒ.ಡಬ್ಲ್ಯೂ.ಎ ಅಧ್ಯಕ್ಷ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: