
ಮೈಸೂರು
ಡಿ.10 : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಘಟಕ ಉದ್ಘಾಟನೆ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ವಿಶೇಷವಾಗಿ ಮತ್ತು ನಿರ್ದಿಷ್ಟವಾಗಿ ತರಬೇತಿ ಪಡೆದ ವ್ಯಕ್ತಿಗಳಿಂದ ಸುರಕ್ಷಿತ ಪರಿಸರವನ್ನು ಮಕ್ಕಳಿಗೆ ಒದಗಿಸುವ ಘಟಕವನ್ನು ಸ್ಥಾಪಿಸುತ್ತಿದ್ದೇವೆ ಎಂದು ಜೆಎಸ್ಎಸ್ ಆಸ್ಪತ್ರೆಯ ಡಾ.ರೋಷಿಣಿ ಎಸ್.ಆರ್ ಹೇಳಿದರು.
ಮೈಸೂರಿನ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಷಿಣಿ, ಡಿಸೆಂಬರ್ 01 ರಂದು ಬೆಳಿಗ್ಗೆ 10 ಗಂಟೆಗೆ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಘಟಕ’ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರರಾವ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇಂತಹ 3 ಘಟಕಗಳು ಈಗಾಗಲೇ ಇವೆ. ಆದರೆ ಮೈಸೂರಿನಲ್ಲಿ ಮೊದಲ ಬಾರಿಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಈ ಘಟಕವನ್ನು ಸ್ಥಾಪಿಸುತ್ತಿದ್ದೇವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ಕಾರ್ಯನಿರತ ಒಂದು ತಜ್ಞರ ತಂಡ ತುರ್ತುಚಿಕಿತ್ಸಾ ವಿಭಾಗ / ಒಪಿಡಿಯಲ್ಲಿದ್ದು, ಪೊಲೀಸ್ ಸಿಬ್ಬಂದಿ, ವೈದ್ಯಕೀಯ ವೃತ್ತಿಪರರು, ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮಕ್ಕಳ ಮನೋವೈಜ್ಞಾನಿಕ ಸಲಹೆ/ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಎಸ್ಎಸ್ ಆಸ್ಪತ್ರೆಯ ಡಾ.ಬಸವನೇಗೌಡ, ಡಾ.ಎಂ.ಡಿ.ರವಿ, ಡಾ.ಎಸ್.ಕೆ.ಗೋರಿ ಉಪಸ್ಥಿತರಿದ್ದರು.