ಪ್ರಮುಖ ಸುದ್ದಿಮೈಸೂರು

ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ : ಅಮಿತ್ ಷಾ

ಪ.ಜಾತಿಯ ಮುಖಂಡರಿಂದ ಹೆಗಡೆ ಹೇಳಿಕೆಗಳಿಗೆ ತೀವ್ರ ವಿರೋಧ

ಮೈಸೂರು (ಮಾ.30): ಕರುನಾಡ ಜಾಗೃತಿ ಯಾತ್ರೆ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಪರಿಶಿಷ್ಟ ಜಾತಿಯ ಮುಖಂಡರೊಂದಿಗ ಇಂದು ಮೈಸೂರಿನಲ್ಲಿ ಸಂವಾದ ನಡೆಸಿದರು.

ರಾಜೇಂದ್ರ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಸಂವಾದಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಶಿವರಾಮ್ ಅವರು ಅಮಿತ್ ಷಾ ಅವರಿಗೆ ಬೆಳ್ಳಿ ಕಿರೀಟವನ್ನು ಉಡುಗೊರೆಯಾಗಿ ನೀಡಿದರು.

ಸಂವಾದದಲ್ಲಿ ಮಾತನಾಡಿದ ಅವರಿಗೆ ನೂರಾರು ಪ್ರಶ್ನೆಗಳು ಬಂದಿದ್ದು ಅದರಲ್ಲಿ ಅನಂತ ಕುಮಾರ್ ಹೆಗಡೆ ಅವರ ಹೇಳಿಕೆಯ ಪ್ರಶ್ನೆಗಳೇ ಹೆಚ್ಚಿದ್ದವು. ಅನಂತ ಕುಮಾರ್ ಹೆಗಡೆ ಅವರ ಹೇಳಿಕೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದ ಕೂಡಲೇ ದಲಿತ ಮುಖಂಡ ಚೋರನಹಳ್ಳಿ ಶಿವಣ್ಣ ತೀವ್ರ ವಿರೋಧ ವ್ಯಕ್ತ ಪಡಿಸಿದರು.

ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲವೆಂದರೆ ಅವರನ್ನು ಪಕ್ಷದಿಂದ ಹೊರ ಹಾಕಿ ಎಂದು ವಿರೋಧ ವ್ಯಕ್ತಪಡಿಸಿದರು. ನಂತರ ಅವರನ್ನು ಬಿಜೆಪಿ ಕಾರ್ಯಕರ್ತರು ಸಮಾಧಾನಪಡಿಸಲು ಯತ್ನಿಸಿದರು. ನಂತರ ಪೋಲೀಸರು ಅವರನ್ನು ಬಲವಂತವಾಗಿ ಹೊರಕ್ಕೆ ಕರೆದೊಯ್ದರು.

ನಂತರ ಮಾತನಾಡಿದ ಅಮಿತ್ ಶಾ ಬ್ಯಾಗ್ ಲ್ಯಾಕ್ ಹುದ್ದೆ, ಬಡ್ತಿ ಬಗ್ಗೆ ದಲಿತರಿಗೆ ಅನುಕೂಲ ಆಗುವಂತೆ ಅರ್ಜಿ ಸಲ್ಲಿಸುತ್ತೇವೆ. ಮಹಿಳಾ ಮೀಸಲಾತಿ ಪರ ಬಿಜೆಪಿ ಇದೆ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದರು.

ಪೌರ ಕಾರ್ಮಿಕನ ಪ್ರಶ್ನೆಗೆ ಉತ್ತರ ನೀಡಿದ ಶಾ ಅವರು, ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ವಿಸ್ತಾರವಾಗಿ ನಮೂದಿಸುತ್ತೇನೆ ಎಂದರು. ರೈಲ್ವೆ ಬಡ್ತಿ ರಕ್ಷಣೆಗೆ ಬಿಜೆಪಿ ಮುಂದಾಗಲಿದೆ ಎಂದರು.

ಸಂವಿಧಾನದಲ್ಲಿರುವ ನೀತಿಯನ್ನು ಅನುಸರಿಸದೇ ಅದನ್ನು ವಿರೋಧಿಸಿ ನಡೆಯುತ್ತಿರುವ ದೇಶದ ಒಂದೇ ಒಂದು ಪಕ್ಷ ಅದು ಕಾಂಗ್ರೆಸ್ ಪಕ್ಷ  ಎಂದು ಆರೋಪಿಸಿದ ಷಾ, ಅಂಬೇಡ್ಕರ್ ಅವರು ಬದುಕಿದ್ದಾಗ ಕಾಂಗ್ರೆಸ್ ಅವರಿಗೆ ಯಾವುದೇ ಗೌರವ ಕೊಡಲಿಲ್ಲ ಎಂದು ದೂರಿದರು.

ಅಂಬೇಡ್ಕರ್ ಅವರ ಐದು ಸ್ಮಾರಕ ಕಟ್ಟಿಸಿದ್ದು, ನಾಣ್ಯಗಳಿಗೆ ಅಂಬೇಡ್ಕರ್ ಅವರ ಭಾವ ಚಿತ್ರ ಅಳವಡಿಸಿದ್ದೇವೆ. ಬಡವನ ಮಗ ಇಂದು ಪ್ರಧಾನಿಯಾಗಿದ್ದಾರೆ. ಕೆಂಪು ಕೋಟೆಯಲ್ಲಿ ಭಾಷಣ ಮಾಡೋ ಸಂದರ್ಭ ಬ್ಯಾಂಕ್ ಯೋಜನೆ ಜಾರಿಗೆ ತಂದಿದ್ದಾರೆ. ಉಜ್ವಲ ಯೋಜನೆಯನ್ನು ಒಂದು ಕೋಟಿ ಜನರಿಗೆ ತಲುಪುವಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ದಲಿತ ವಿರೋಧಿ ಸರ್ಕಾರ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗಿದೆ ಎಂದು ಆರೋಪಗಳ ಸುರಿಮಳೆಗೈದರು.

ಸಂವಾದದಲ್ಲಿ ಬಿಜೆಪಿ ಮುಖಂಡ ವಿ.ಶ್ರಿನಿವಾಸ್ ಪ್ರಸಾದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. (ಕೆ.ಎಸ್/ಎಸ್.ಎಚ್)

Leave a Reply

comments

Related Articles

error: