
ಕ್ರೀಡೆ
ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ : ವಸಂತಪೂಜಾರಿ ತಂಡಕ್ಕೆ ಪ್ರಶಸ್ತಿ
ರಾಜ್ಯ(ಮಡಿಕೇರಿ)ಮಾ.31;- ಕೆಂಚಮ್ಮನಬಾಣೆಯ ಶ್ರೀ ಆದಿ ನಾಗಬ್ರಹ್ಮ ಮೋಗ್ಗೇರ್ಕಳ ಯುವಕ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟದ ಪ್ರಶಸ್ತಿಯನ್ನು ವಸಂತಪೂಜಾರಿ ತಂಡ ಮಡಿಲಿಗೆ ಹಾಕಿಕೊಂಡಿತು. ಮಂಜೂರು ತಮ್ಮಣ್ಣಿ ತಂಡ ಸ್ಥಾನ ಪಡೆಯಿತು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ತಂಡಗಳು ಉತ್ತಮ ಪ್ರದರ್ಶನ ನೀಡಿದರಾದರೂ ಫೈನಲ್ಗೆ ಮಂಜೂರು ತಮ್ಮಣ್ಣಿ ತಂಡ ಹಾಗೂ ಕೆಂಚಮ್ಮನಬಾಣೆಯ ವಸಂತಪೂಜಾರಿ ತಂಡಗಳು ಪ್ರವೇಶ ಪಡೆದವು. ಪಂದ್ಯದ ಮೊದಲರ್ಧಕ್ಕೆ 7 ಪಾಯಿಂಟ್ಗಳ ಹಿಂದಿದ್ದ ವಷಂತ ಪೂಜಾರಿ ತಂಡ ಅಂತಿಮ ಹಂತದ ಹಣಾಹಣಿಯಲ್ಲಿ 3 ಪಾಯಿಂಟ್ಗಳನ್ನು ಪಡೆದು ವಿಜಯ ಮಾಲೆ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕುಶಾಲನಗರದ ಹೊಟೆಲ್ಮಿನಿಸ್ಟರ್ ಕೋರ್ಟ್ಸ್ ತಂಡ ಹಾಗೂ ಬಿಎಂಎಸ್ಎಸ್ ‘ಬಿ’ ತಂಡಗಳು ಸೆಮಿ ಫೈನಲ್ನಲ್ಲಿ ಸೋಲು ಕಾಣುವುದರೊಂದಿಗೆ ತೃತಿಯ ಬಹುಮಾನ ಪಡೆಯಿತು.
ಪ್ರಥಮ ಬಹುಮಾನವಾದ ಆಕರ್ಷಕ ಟ್ರೋಫಿಯೊಂದಿಗೆ ರೂ. 30ಸಾವಿರ ನಗದನ್ನು ವಸಂತ ಪೂಜಾರಿ ತಂಡ ಪಡೆದರೆ, ದ್ವಿತೀಯ ಬಹುಮಾನವನ್ನು ಮಂಜೂರು ತಮ್ಮಣ್ಣಿ ತಂಡ ಆಕರ್ಷಕ ಟ್ರೋಫಿ ಹಾಗೂ ರೂ. 15 ಸಾವಿರ ನಗದು ಪಡೆಯಿತು. ತೃತೀಯ ಬಹುಮಾನವಾದ ತಂಡವೊಂದಕ್ಕೆ ತಲಾ ರೂ. 3,500 ನಗದು ಹಾಗೂ ಟ್ರೋಫಿಗಳನ್ನು ಕುಶಾಲನಗರದ ಹೊಟೆಲ್ಮಿನಿಸ್ಟರ್ ಕೋರ್ಟ್ಸ್ ತಂಡ ಹಾಗೂ ಬಿಎಂಎಸ್ಎಸ್ ಬಿ ತಂಡಗಳು ಪಡೆದವು.
ಪಂದ್ಯಾಟದಲ್ಲಿ ಉತ್ತಮ ದಾಳಿಗಾರನಾಗಿ ಮಂಜೂರು ತಮ್ಮಣ್ಣಿ ತಂಡದ ಮಿಥುನ್, ಉತ್ತಮ ಹಿಡಿತಗಾರನಾಗಿ ವಸಂತ ಪೂಜಾರಿ ತಂಡದ ಸ್ವಾಮಿ, ಸರ್ವೋತ್ತಮ ಆಟಗಾರನಾಗಿ ಹೋಟೆಲ್ ಮಿನಿಸ್ಟರ್ ಕೋಟ್ರ್ಸ್ ತಂಡದ ಆದರ್ಶ್ ಆಯ್ಕೆಯಾಗಿ ಬಹುಮಾನ ಪಡೆದರು. 17 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬಾಲಕರ ಕಬ್ಬಡ್ಡಿ ಪಂದ್ಯಾಟದಲ್ಲಿ ತೋಳೂರುಶೆಟ್ಟಳ್ಳಿಯ ಮೊಗೇರಾ ಕ್ಷೇಮಾಭಿವೃದ್ಧಿ ಸಂಘದ ತಂಡ ಪ್ರಥಮ ಸ್ಥಾನ ಗಳಿಸಿ, ಆಕರ್ಷಕ ಟ್ರೋಫಿಯೊಂದಿಗೆ ನಗದು ರೂ. 3 ಸಾವಿರವನ್ನು ತನ್ನದಾಗಿಸಿಕೊಂಡರೆ, ಕೋವರ್ಕೊಲ್ಲಿಯ ಸೆವೆನ್ ವಾರಿಯರ್ಸ್ ತಂಡ ದ್ವಿತೀಯ ಸ್ಥಾನ ಪಡೆದು, ಟ್ರೋಫಿಯೊಂದಿಗೆ ನಗದು ರೂ. 1,500ನ್ನು ಪಡೆಯಿತು.
ಪಂದ್ಯಾಟದ ತೀರ್ಪುಗಾರರುಗಳಾಗಿ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ನ ತೀರ್ಪುಗಾರರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಕೂಡಿಗೆಯ ಎ.ಎಂ. ಆನಂದ್, ಗೌಡಳ್ಳಿಯ ಪ್ರವೀಣ್, ಬೇಳೂರಿನ ಎಚ್.ಬಿ. ಕೃಷ್ಣಪ್ಪ, ಹಂಡ್ಲಿಯ ಕೃಷ್ಣಪ್ಪ, ಕೂಡ್ಲೂರಿನ ಚೇತನ್ ಹಾಗೂ ಕುಸುಬೂರಿನ ಉಲ್ಲಾಸ್ರವರುಗಳು ಕಾರ್ಯ ನಿರ್ವಹಿಸಿದರು.ಪಂದ್ಯಾಟದ ಯಶಸ್ಸಿಗಾಗಿ ಶ್ರೀ ಆದಿ ನಾಗಬ್ರಹ್ಮ ಮೋಗ್ಗೇರ್ಕಳ ಯುವಕ ಸಂಘದ ಕ್ರೀಡಾಧ್ಯಕ್ಷ ಕೆ.ಕೆ. ನಂದಕುಮಾರ್ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ಕೆ.ಎ. ದೀನೇಶ್, ಕಾರ್ಯದರ್ಶಿ ಎಂ.ಎನ್. ಸದಾನಂದ, ಉಪಾಧ್ಯಕ್ಷ ಎನ್. ದಿವಾಕರ್, ಖಜಾಂಚಿ ರಾಮು, ಕ್ರೀಡಾ ಉಪಾಧ್ಯಕ್ಷ ಸುದರ್ಶನ್, ಸಲಹೆಗಾರ ಜಗದೀಶ್ ಹಾಗೂ ಸದಸ್ಯರುಗಳು ಶ್ರಮಿಸಿದ್ದರು.(ಕೆಸಿಐ,ಎಸ್.ಎಚ್)