ಪ್ರಮುಖ ಸುದ್ದಿಮೈಸೂರು

ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮೀನು ಮತ್ತು ನೀರಿನ ಸಂಬಂಧವಿದ್ದಂತೆ : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವ್ಯಂಗ್ಯ

ಯಾರ ಜೊತೆಯಲ್ಲೂ ಸೇರದೇ ನಮ್ಮ ಶಕ್ತಿಯಿಂದಲೇ ಸರ್ಕಾರ ರಚಿಸುತ್ತೇವೆ

ಮೈಸೂರು,ಮಾ.31:- ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮೀನು ಮತ್ತು ನೀರಿನ ಸಂಬಂಧವಿದ್ದಂತೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವ್ಯಂಗ್ಯವಾಡಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು ಮಾತನಾಡಿ ಕರ್ನಾಟಕದಲ್ಲಿನ ಭ್ರಷ್ಟಾಚಾರ ಮೀನು ಮತ್ತು ನೀರಿನ ಸಂಬಂಧದಂತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಬಹಳ ವೇಗವಾಗಿ ಬೆಳೆಸಿಕೊಂಡು ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರಲ್ಲದೇ ಮುಂದೇ ಇದೇ ಸರ್ಕಾರ ಮುಂದುವರಿದಲ್ಲಿ ಭ್ರಷ್ಟಾಚಾರದ ಸುನಾಮಿಯೇ ಅಪ್ಪಳಿಸಲಿದೆ ಎಂದು ಎಚ್ಚರಿಸಿದರು. ದೇಶದಲ್ಲಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ದಿನದ 24ಗಂಟೆಯೂ ವಿದ್ಯುತ್ ಇರಲಿದೆ. ಕರ್ನಾಟಕದಲ್ಲಿ ಬೆಂಗಳೂರು ಐಟಿ ಹಬ್. ಎಷ್ಟೊಂದು ಆದಾಯ ಬರಲಿದೆ. ಆದರೆ 24 ಗಂಟೆ ವಿದ್ಯುತ್ ಇಲ್ಲ.  ರಾಜ್ಯದಲ್ಲಿ ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಜೀವಮಾನದಲ್ಲಿ ಇಷ್ಟೊಂದು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೇಳಿರಲಿಲ್ಲ. ಕೇಂದ್ರ ಸರ್ಕಾರ ನೀಡಿದ ಎಷ್ಟೊಂದು ಅನುದಾನಗಳನ್ನು ರಾಜ್ಯ ಸರ್ಕಾರ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆಸುವುದನ್ನು ಬಿಟ್ಟರೆ ಬೇರೆಯದಕ್ಕೆ ಮಹತ್ವವೇ ಇಲ್ಲ ಎಂದು ಟೀಕಿಸಿದರು. ಕರ್ನಾಟಕದ ಹಲವು ಕಡೆ ಪ್ರವಾಸ ನಡೆಸಿದ್ದೇನೆ. ರಾಜ್ಯದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಅನೇಕರು ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೋಸಿಹೋಗಿದ್ದಾರೆ. ಜೆಡಿಎಸ್ ಸರ್ಕಾರ ರಚಿಸುವ ಸ್ಥಿತಿಯಲ್ಲಿಲ್ಲ. ಕರ್ನಾಟಕದ ಜನತೆಯ ಬಯಸಿದ ಬದಲಾವಣೆಯನ್ನು ಜೆಡಿಎಸ್ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ನೇತೃತ್ವದ ಮೋದಿ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು. ಒಬಿಸಿಗೆ ಮಾನ್ಯತೆ ನೀಡಲು ಬಹುಮತವೂ ಲಭಿಸಿತ್ತು. ಆದರೆ ಅಪ್ರೂವಲ್ ಗೆ ರಾಜ್ಯಸಭಾ ಗೆ ಕಳುಹಿಸಿದಾಗ ಪೂರ್ಣ ಬಹುಮತ ಲಭಿಸಿಲ್ಲ. ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ ತಡೆಯೊಡ್ಡಿದರು.

ನಾನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಕೇಳಲು ಇಷ್ಟಪಡುತ್ತೇನೆ ಅದೇನೆಂದರೆ ನಾನು ಒಬಿಸಿ, ನಾನು ಪರಿಶಿಷ್ಟ ಜಾತಿ-ಪಂಗಡದ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ ಎನ್ನುತ್ತೀರಲ್ಲ ಮತ್ತೆ ಒಬಿಸಿ ಬಿಲ್ ಪಾಸ್ ಮಾಡಲು ನಿಮ್ಮ ಪಕ್ಷದವರೇ ತಡೆಯೊಡ್ಡುತ್ತಾರಲ್ಲ ಅವರನ್ನು ಯಾಕೆ ಪ್ರಶ್ನಿಸುತ್ತಿಲ್ಲ ಎಂದರು. ನರೇಂದ್ರ ಮೋದಿಯವರು ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟವರ್ಗಕ್ಕೆ ಸೇರಿಸಿ ಮಾನ್ಯತೆ ದೊರಕಿಸಿಕೊಟ್ಟರು. ನರೇಂದ್ರ ಮೋದಿಯವರು ಬಜೆಟ್ ನಲ್ಲಿ ರಾಜ್ಯದ 10ಕೋಟಿ ಬಡ ಜನರಿಗೆ 5ಲಕ್ಷದವರೆಗೆ ವೈದ್ಯಕೀಯ ವಿಮೆಯನ್ನು ಒದಗಿಸುತ್ತಿದ್ದಾರೆ. ಆದಿವಾಸಿ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ. ಮನಮೋಹನ್ ಸಿಂಗ್-ಸೋನಿಯಾ ಅಧಿಕಾರಾವಧಿಯಲ್ಲಿ ರಾಜ್ಯಕ್ಕೆ 88.583ಕೋ.ರೂ.ಸಿಗುತ್ತಿತ್ತು. ಆದರೆ ಮೋದಿ ಸರ್ಕಾರ ಬಂದಾಗ 2,19,506 ಕೋ.ರೂ.ನೀಡಿದೆ ಎಂದರು. ಒಟ್ಟು 79 ಸಾವಿರ ಕೋಟಿ ಅನುದಾನ ಕೊಡುವ ಕಾರ್ಯಕ್ರಮಗಳು ಕೇಂದ್ರದ ಬಳಿಯಿವೆ ಎಂದು ತಿಳಿಸಿದರು. ಸಿಎಂ ಸರ್ಕಾರ ಸ್ಪೀಡ್ ಬ್ರೇಕರ್ ಇದ್ದಂತೆ. ಈ ಸರ್ಕಾರವನ್ನು ನೀವು ನಿಲ್ಲಿಸದಿದ್ದರೆ ಮುಂದೆ ಹೈವೆಯಲ್ಲೂ ಓಡಾಡಲು ತೊಂದರೆ ಅನುಭವಿಸಬೇಕು. ಹಾಗಾಗಿ ರಾಜ್ಯದ ಜನ ಸಿಎಂ ಸರ್ಕಾರಕ್ಕೆ ಸರಿಯಾಗಿ ಬುದ್ಧಿ ಕಲಿಸಬೇಕಿದೆ. ರಾಜ್ಯದಲ್ಲಿ ಬಿಎಸ್ವೈ ಸರ್ಕಾರವನ್ನು ರಾಜ್ಯದ ಜನರು ತರಬೇಕು ಎಂದರು.

ರಾಜವಂಶಸ್ಥರ ಜೊತೆ ಅಮಿತ್ ಷಾ ಭೇಟಿ ವಿಚಾರಕ್ಕೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ನನ್ನ ಅವರ ಭೇಟಿ ರಹಸ್ಯ ಹೇಳಲು ಸಾಧ್ಯವಿಲ್ಲ. ನನ್ನ ಅವರ ಮಾತುಕತೆ ಸೌಹಾರ್ದತೆಯುತವಾಗಿದೆ ಅಷ್ಟೇ ಎಂದ ಷಾ ಪರೋಕ್ಷವಾಗಿ ಗೌಪ್ಯ ಮಾತುಕತೆಯ ರಹಸ್ಯ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದರು. 21 ರಾಜ್ಯಗಳ ಚುನಾವಣಾಗಳಂತೆ ಇಲ್ಲಿಯೂ ಚುನಾವಣೆ ಎದರಿಸುತ್ತೇವೆ. ನಮಗೆ ಸಿದ್ದರಾಮಯ್ಯ ಎದುರಿಸಲು ಯಾವುದೇ ವ್ಯತ್ಯಾಸವಿಲ್ಲ. ಇಲ್ಲಿನ ಜನರೇ ತಿರ್ಮಾನ ಮಾಡಿದ್ದಾರೆ. ಕರ್ನಾಟಕದಲ್ಲಿ ನಮಗೆ ಚುನಾವಣೆ ಎದುರಿಸೋಕೆ ಯಾವುದೇ ಕಷ್ಟ ಇಲ್ಲ. ಬಿಜೆಪಿ ಎಂದೂ ಕೂಡ ಜಾತಿ ಆಧಾರದ ಮೇಲೆ ಮತ ಯಾಚನೆ ಮಾಡಿಲ್ಲ. ಎಲ್ಲಾ ಸಮುದಾಯವನ್ನು ಒಟ್ಟಾಗಿ ಕೊಂಡೊಯ್ಯುವ ಗುರಿಯನ್ನು ಬಿಜೆಪಿ ಹೊಂದಿದೆ ಸಾರ್ವಜನಿಕವಾಗಿ ಜೀವನದ ಆಧಾರದ ಮೇಲೆ ಟಿಕೆಟ್ ಹಂಚಲಾಗುತ್ತದೆ. ಹಿಂದಿನ ಸರ್ಕಾರದ ಎಲ್ಲ ವಿಷಯಗಳನ್ನು ಪರಿಗಣಿಸಿ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದರು. ಮೈಸೂರಿಗೆ ಹೆಚ್ಚು ಗಮನ ಹರಿಸಿರೋದು ನಿಜ.ಈ ಭಾಗದಲ್ಲಿ ನಾವು ಒಂದೂ ಸೀಟು ಗೆದ್ದಿಲ್ಲ.ಈ ಕಾರಣಕ್ಕಾಗಿಯೇ ನಾವು ಹೆಚ್ಚು ಗಮನ ಹರಿಸಿದ್ದೇವೆ. ಈ ಬಾರಿ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿ ಯಡ್ಯೂರಪ್ಪಗೆ 5 ವರ್ಷ ಮುಖ್ಯಮಂತ್ರಿಯಾಗಿರೋದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಡುತ್ತೇವೆ. ಈ ಬಾರಿಯ ಸರ್ಕಾರ ರೈತಪರ ಸರ್ಕಾರ ಆಗಲಿದೆ. ಯಡ್ಯೂರಪ್ಪ ಮುಖ್ಯಮಂತ್ರಿಯಾಗೋದನ್ನು ತಡೆಯೋಕೆ ಲಿಂಗಾಯತ ಸಮುದಾಯದ ವಿವಾದ ತೆಗಿದ್ದಾರೆ. ಸಿದ್ದರಾಮಯ್ಯ ಧರ್ಮಗಳ ಬಗ್ಗೆ ಒಡಕು ಉಂಟು ಮಾಡಿದ್ದಾರೆ. ಇದನ್ನ ಬಿಜೆಪಿ ಸಮರ್ಥವಾಗಿ ಎದುರಿಸಲಿದೆ ಎಂದರು. ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ. ಜನಾರ್ದನ ರೆಡ್ಡಿ ಜೊತೆ ಬಿಜೆಪಿಗೆ ಸಂಬಂಧ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್,ಸಚಿವ ಅನಂತಕುಮಾರ್,ಮಾಜಿ ಡಿಸಿಎಂ ಆರ್.ಅಶೋಕ್, ಶಾಸಕ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು. (ಕೆ.ಎಸ್,ಜಿ.ಕೆ,ಎಸ್.ಎಚ್)

Leave a Reply

comments

Related Articles

error: