ಕರ್ನಾಟಕ

ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಯೋಗರಾಜ್ ಭಟ್ ಗೀತ ರಚನೆ : ಹಾಡಿನ ಚಿತ್ರೀಕರಣಕ್ಕೆ ಚಾಲನೆ

ಬೆಂಗಳೂರು,ಮಾ.31-ರಾಜ್ಯ ವಿಧಾನಸಭೆ ಚುನಾವಣೆ ಮೇ 12 ರಂದು ನಡೆಯಲಿದ್ದು, ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸಿವೆ. ಈ ನಡುವೆ ರಾಜ್ಯ ಚುನಾವಣಾ ಆಯೋಗ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಅದರಂತೆ ರಾಜ್ಯ ಚುನಾವಣಾ ಆಯೋಗದ ಮನವಿಯ ಮೇರೆಗೆ ನಿರ್ದೇಶಕ ಯೋಗರಾಜ್ ಭಟ್ ಮತದಾನದ ಕುರಿತು ವಿಶೇಷವಾದ ಗೀತೆಯೊಂದನ್ನು ರಚಿಸಿದ್ದಾರೆ. ಪಾರದರ್ಶಕ ಮತದಾನವನ್ನು ಉತ್ತೇಜಿಸುವ ಸಂಬಂಧ ಈ ಗೀತೆಯನ್ನು ಬಳಸಿಕೊಳ್ಳಲಾಗುತ್ತಿದೆ.

ಶುಕ್ರವಾರ ಈ ಗೀತೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಹಾಗೂ ವಿಧಾನಸೌಧದ ಮುಂಭಾಗ ಚಿತ್ರೀಕರಣ ನಡೆಯಿತು. ರಾಜ್ಯದ ನೂರಾರು ಸಾಂಸ್ಕೃತಿಕ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಗೀತೆಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಗಾಯಕ ವಿಜಯ್ ಪ್ರಕಾಶ್ ಮತ್ತವರ ತಂಡ ಗೀತೆಯನ್ನು ಹಾಡಿದೆ. ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿದ್ದಾರೆ. ಐದು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ರಾಜ್ಯದ ವಿವಿಧೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಪಂಚತಂತ್ರ ಚಿತ್ರತಂಡದ ನಾಯಕ ವಿಹಾನ್ ಸೇರಿದಂತೆ ಹಲವು ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡರು.

ಈ ಚುನಾವಣೆ ಗೀತೆಯ ಪರಿಕಲ್ಪನೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರದ್ದು. ಅವರು ಚುನಾವಣೆಗೆ ಗೀತೆ ಸಿದ್ಧಪಡಿಸಲು ಉತ್ಸಾಹ ತೋರಿದರು. ನಾವು ವಿಕಲಚೇತನರು, ಆದಿವಾಸಿಗಳು ಮತ್ತು ಯುವ ಮತದಾರರನ್ನು ಈ ಚುನಾವಣಾ ಗೀತೆಯ ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಿದ್ದೇವೆ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದರು.

ವಿಧಾನಸೌಧದ ಮುಂಭಾಗ ಚಿತ್ರೀಕರಣಕ್ಕೆ ಚಾಲನೆ ನೀಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಈ ಯೋಜನೆ ಕುರಿತು ನಾವು ಬಹಳ ಕಾಲ ಸಂಶೋಧನೆ ನಡೆಸಿದ್ದೇವೆ. ಈ ಗೀತೆ ಜಾಗೃತ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಲಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಲು ಪ್ರೇರೇಪಿಸುತ್ತದೆ ಎಂದರು. (ಎಂ.ಎನ್)

Leave a Reply

comments

Related Articles

error: