ಮೈಸೂರು

‘ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ’ : ಹೆಚ್.ಆರ್.ಲೀಲಾವತಿ

ಮೈಸೂರು, ಏ.2:- ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸರಸ್ವತಿಪುರಂ ಸೇವಾ ಕೇಂದ್ರದಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕದ ಪ್ರಖ್ಯಾತ ಸುಗಮ ಸಂಗೀತ ಕಲಾವಿದರಾದ ಹೆಚ್.ಆರ್.ಲೀಲಾವತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳಾ ದಿನಾಚರಣೆಯನ್ನು ಅನೇಕ ವರ್ಷಗಳಿಂದ ಆಚರಣೆ ಮಾಡುತ್ತಾ ಬಂದಿದ್ದೇವೆ. ಆದರೂ ಕೂಡ ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ ಪ್ರೀತಿಯಿಂದ ಸಾಕಿ ಸಲಹಿದ ಮಕ್ಕಳೇ ತಂದೆ-ತಾಯಿಯನ್ನು ಪೋಷಿಸುವ ಬದಲು ಇದಾವುದೂ ನಮ್ಮ ಜವಾಬ್ದಾರಿ ಅಲ್ಲವೆಂದು ಭಾವಿಸಿ ವೃದ್ದಾಶ್ರಮಕ್ಕೆ ಕಳುಹಿಸುವಂತಹ ಪರಿಪಾಠವಾಗಿದೆ. ಇಂಥಹ ಪರಿಸ್ಥಿತಿ ಮುಂದೊಂದು ದಿನ ತಮಗೂ ಕಾದಿದೆ ಎಂಬ ಅರಿವಿಲ್ಲದೆ ಇಂಥಹ ಕೆಲಸದಲ್ಲಿ ತೊಡಗಿದ್ದಾರೆ. ಮಕ್ಕಳಿಗೆ ಜ್ಞಾನದ ಕೊರತೆ ಇರುವುದರಿಂದ ಇಂಥಹ ಕೆಲಸವನ್ನು ಮುಂದುವರಿಸುತ್ತಿದ್ದಾರೆ. ಆದ್ದರಿಂದ ಈ ಮಕ್ಕಳಿಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಜ್ಞಾನದ ಬಗ್ಗೆ ನಿತ್ಯ ಶಿಕ್ಷಣವನ್ನು ಕೊಡುತ್ತಿದ್ದಾರೆ. ಆದ್ದರಿಂದ ಎಲ್ಲರೂ ಇಂತಹ ಸಂಸ್ಥೆಗಳಿಗೆ ಬಂದು ಜ್ಞಾನ ಸಂಪಾದನೆಯನ್ನು ಪಡೆದುಕೊಂಡರೆ ವೃದ್ಧರನ್ನು ವೃದ್ದಾಶ್ರಮಕ್ಕೆ ತಳ್ಳದೆ ಇದು ನಮ್ಮ ಜವಾಬ್ದಾರಿಯೆಂದು ಭಾವಿಸಿ ತಮ್ಮ ತಂದೆ ತಾಯಿಯರ ಜವಾಬ್ದಾರಿಯನ್ನು ಮಕ್ಕಳೇ ನಿರ್ವಹಿಸಬಹುದೆಂದು ತಿಳಿಸಿದರು.

ಸರಸ್ವತಿಪುರಂ ಸೇವಾ ಕೇಂದ್ರದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಯೋಗೇಶ್ವರಿ ಮಾತನಾಡಿ ಕುಟುಂಬದಲ್ಲಿ ಸುಖ-ಶಾಂತಿಗೆ ಆಧಾರ-ಮಹಿಳೆ ಎಂಬ ವಿಷಯದ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ಇದೊಂದು ದಿನ ಮಾತ್ರ ಮಹಿಳಾ ದಿನಾಚರಣೆಯನ್ನು ಮಾಡುವುದಲ್ಲ, ಮನೆಯಲ್ಲಿರುವ ಮಹಿಳೆಯರನ್ನು ಗುರುತಿಸಿ ಅವರಿಗೆ ಸಿಗಬೇಕಾದಂತಹ ಗೌರವವನ್ನು ಕೊಟ್ಟರೆ ಖಂಡಿತವಾಗಿ ಪ್ರತಿ ಮನೆಯಲ್ಲಿ ಪ್ರತಿನಿತ್ಯ ಮಹಿಳಾ ದಿನಾಚರಣೆಯನ್ನು ಆಚರಿಸಿದಂತಾಗುತ್ತದೆ. ನಾರಿಯರನ್ನು ಎಲ್ಲಿ ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ. ಅಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪ್ರಮುಖವಾದ ಸ್ಥಾನವನ್ನು ಕೊಡಲಾಗಿದೆ. ಮಹಿಳೆಯರು ಕುಟುಂಬಕ್ಕೆ ಮತ್ತು ನಾಡಿಗೆ ಕೊಡುವಂತಹ ಕೊಡುಗೆಯನ್ನು ಗಮನಿಸಿ ಈ ಮಾತನ್ನು ಹೇಳಲಾಗಿದೆ. ಮಹಿಳೆಯರಿಗೆ ಎಷ್ಟು ಗೌರವವನ್ನು ಕೊಡುತ್ತೇವೆಯೋ ಅಷ್ಟು ದೈವೀ ಗುಣಗಳು ಪುರುಷರಲ್ಲಿ ಹೆಚ್ಚಾಗುತ್ತವೆ. ಆದ್ದರಿಂದ ಮಹಿಳೆಯರನ್ನು ಗೌರವಿಸುವಂತಹ ಸಭ್ಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಹೀಗಿದ್ದಲ್ಲಿ ಕುಟುಂಬದಲ್ಲಿ ಸುಖ-ಶಾಂತಿಗೆ ಆಧಾರ-ಮಹಿಳೆ ಎಂದು ತಿಳಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜುಪ್ತಿಮಠ ಹಿಂದಿ ಉಪನ್ಯಾಸಕರಾದ  ಕಲ್ಪನಾ.ಎಸ್ ಪಾಲ್ಗೊಂಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಸಿ.ಬಿ.ವತ್ಸಲ ವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: