ಮೈಸೂರು

ಕನಸುಗಳನ್ನು ಕಾರ್ಯಗತಗೊಳಿಸಲು ಮೌಲ್ಯಯುತ ಜೀವನವನ್ನು ನಡೆಸಬೇಕು : ಸಿದ್ಧೇಶ್ವರ ಮಹಾಸ್ವಾಮೀಜಿ

ಮೈಸೂರು,ಏ.2:- ಸುತ್ತೂರು ಶ್ರೀಕ್ಷೇತ್ರದಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಶಿಬಿರವು ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಸಿದ್ಧೇಶ್ವರ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ನಡೆಯುತ್ತಿದೆ.

ಎರಡನೆ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಜಿ.ಬಿ. ಶಿವರಾಜ್‍ ಅವರು ‘ಮೌಲ್ಯ ವರ್ಧಿತ ಶಿಕ್ಷಣ’ ಕುರಿತು ಉಪನ್ಯಾಸ ನೀಡಿದರು. ಜೀವನದಲ್ಲಿ ಮಾನವೀಯ ಮೌಲ್ಯಗಳಿಲ್ಲದೆ ಎಂತಹ ಪದವಿ ಪಡೆದರೂ ಅದು ಪ್ರಯೋಜನಕಾರಿಯಾಗುವುದಿಲ್ಲ ಎಂದ ಅವರು ಗಾಂಧೀಜಿ ಹಾಗೂ ವಿಶ್ವದ ಹಲವಾರು ಪ್ರಮುಖರ ನಿದರ್ಶನಗಳ ಮೂಲಕ ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ಸಿದ್ಧೇಶ್ವರ ಮಹಾಸ್ವಾಮಿಗಳವರು ಪ್ರವಚನ ನೀಡಿ, ನಮಗೆ ದೇವರು ಕೊಟ್ಟಿರುವ ಕೈ, ಕಾಲು, ಮುಂತಾದ ಅಂಗಗಳನ್ನು ಸೂಕ್ತ ಕೆಲಸಗಳಿಗೆ ಬಳಸಿದಲ್ಲಿ ಯಶಸ್ಸು ತಾನಾಗಿ ಬರುತ್ತದೆ ಎಂದರು. ಮಾನವ ಚಿಕ್ಕ ಗುಡಿಸಿಲಿನಲ್ಲಿದ್ದರೂ ದೊಡ್ಡ ಮನಸ್ಸನ್ನು ಹೊಂದಿರಬೇಕು. ಹಾಡುಗಳನ್ನು ಹಾಡುತ್ತಾ, ಸುಂದರ ಕನಸುಗಳನ್ನು ಕಾಣುತ್ತಾ, ಆ ಕನಸುಗಳನ್ನು ಕಾರ್ಯಗತಗೊಳಿಸಲು ಮೌಲ್ಯಯುತ ಜೀವನವನ್ನು ನಡೆಸಬೇಕು ಎಂದು ಹೇಳಿದರು. ಜೀವನವೆಂಬುದು ಕೂಡುವುದು ಮತ್ತು ಕಳೆಯುವುದಲ್ಲ ಇದು ಒಂದು ಅವಕಾಶ, ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಸಂತೋಷದಿಂದ ಜೀವನ ಸಾಗಿಸಬೇಕು ಎಂದರು. ನಂತರ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರೊ. ಎ.ಆರ್ ಸೀತಾರಾಮ್‍  ಒತ್ತಡ ನಿರ್ವಹಣೆ, ಜೀವನ ಕೌಶಲ, ಯೋಗಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು.

ಬೆಳಗಿನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತಿದ್ದ ಶಿಬಿರದಲ್ಲಿ ಶಿಬಿರಾರ್ಥಿಗಳ ಆರೋಗ್ಯ ವರ್ಧನೆಗೆ ಯೋಗ ಕಾರ್ಯಕ್ರಮ ಆಯೋಜಿಸಿದ್ದು, ತುಂಬಾ ಉಪಯುಕ್ತವಾಗಿತ್ತು. ಪಾರಂಪರಿಕ ಆಟಗಳ ಮಹತ್ವ ತಿಳಿಸುವ ಸಲುವಾಗಿ ದೇಶಿಯ ಆಟಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ ಶಿಬಿರಾರ್ಥಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: