
ಮೈಸೂರು
ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿ : ಕೆ.ವಿ.ಸುರೇಶ್
ಮೈಸೂರು,ಏ.2:- ಪೊಲೀಸರು ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ತನ್ನ ವ್ಯಾಪ್ತಿಗೆ ಸೇರಿದ್ದಲ್ಲವೆಂದು ನಿರ್ಲಕ್ಷ್ಯ ತೋರದೇ ಎಲ್ಲರೂ ಸೇರಿ ಅದನ್ನು ವ್ಯವಸ್ಥಿತವಾಗಿ ನಡೆಸಲು ಮುಂದಾಗಿ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಎ.ಕೆ.ಸುರೇಶ್ ತಿಳಿಸಿದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ನಗರ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿಂದು ಮೈಸೂರು ನಗರ ಪೊಲೀಸ್ ಮತ್ತು ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ನಡೆದ ಪೊಲೀಸ್ ಧ್ವಜ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ನಾನು 36ವರ್ಷಗಳ ಕಾಲ ಮೈಸೂರಿನಲ್ಲಿ ಪೊಲೀಸ್ ಸೇವೆ ಸಲ್ಲಿಸಿದ್ದೇನೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೆ. ನನಗೆ ನನ್ನ ಕೆಲಸ ತೃಪ್ತಿ ನೀಡಿದೆ. ನೀವೂ ಕೂಡ ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿಷ್ಠೆ ಮತ್ತು ಶ್ರದ್ಧೆಯಿಂದ ನಿರ್ವಹಿಸಿ. ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಅದು ತನ್ನ ವ್ಯಾಪ್ತಿಗೆ ಬರುವುದಿಲ್ಲ. ಬೇರೆಯವರದ್ದು ಎಂದು ಭಾವಿಸದೇ ಎಲ್ಲವೂ ನಮ್ಮ ಕೆಲಸವೇ ಎಂದು ತಿಳಿದು ಮುನ್ನುಗ್ಗಿ. ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಶ್ರಮಿಸಿ ಎಂದರು. ಇದೇ ವೇಳೆ ಸೇವೆಯಿಂದ ನಿವೃತ್ತಿ ಹೊಂದಿದ ಪೊಲೀಸ್ ರುಗಳನ್ನು ಸನ್ಮಾನಿಸಿದರು.
ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ಧ್ವಜ ದಿನಾಚರಣೆಯನ್ನು ಆಚರಿಸಿದ್ದೇವೆ. ಕಳೆದ ವರ್ಷ ತಮಗೂ ಕಚೇರಿ ಬೇಕು ಎಂದು ತಿಳಿಸಿದ್ದು, ಹೊಸ ಕಚೇರಿಗೆ ಸ್ಥಳಾಂತರ ಹೊಂದಿದ ನಂತರ ನಿವೃತ್ತ ಪೊಲೀಸರಿಗೂ ಕಚೇರಿ ಒದಗಿಸಲು ಕ್ರಮ ವಹಿಸಲಾಗುವುದು. ನಿವೃತ್ತ ಪೊಲೀಸರ ಕಲ್ಯಾಣ ನಿಧಿಯಲ್ಲಿ ಗೊಂದಲಗಳಿದ್ದು ಅದನ್ನು ಚರ್ಚಿಸಿ ಬಗೆಹರಿಸಲಾಗುವುದು ಎಂದರು.
ಈ ಸಂದರ್ಭ ದಕ್ಷಿಣ ವಲಯ ಐಜಿಪಿ ಸೌಮೇಂದು ಮುಖರ್ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಡಿಸಿಪಿ ವಿಷ್ಣುವರ್ಧನ್, ಪ್ರಾಂಶುಪಾಲ ವಿಫುಲ್ ಕುಮಾರ್ ಮತ್ತಿತರರರಿದ್ದರು. (ಕೆ.ಎಸ್,ಎಸ್.ಎಚ್)