ಮೈಸೂರು

ವಿಜಯೇಂದ್ರ ಯಾಕ್ರೀ ಅವರ ಅಪ್ಪ ಯಡ್ಯೂರಪ್ಪ ಅವರಿಗೇ ಬಂದು ನಿಲ್ಲೋಕೆ ಹೇಳ್ರಿ : ವರುಣಾ ಕ್ಷೇತ್ರ ಸ್ಪರ್ಧೆ ಕುರಿತು ಗರಂ ಆದ ಸಿಎಂ ಸಿದ್ದರಾಮಯ್ಯ

ಮೈಸೂರು,ಏ.2:- ವರುಣಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ವಿಜಯೇಂದ್ರ ಯಾಕ್ರೀ ಅವರ ಅಪ್ಪ ಯಡ್ಯೂರಪ್ಪ ಅವರಿಗೇ  ಬಂದು ನಿಲ್ಲೋಕೆ ಹೇಳ್ರಿ ಎಂದುತ್ತರಿಸಿದ್ದಾರೆ.

ತಮ್ಮ ನಿವಾಸದಲ್ಲಿಂದು ಮೈಸೂರಿನಲ್ಲಿ ವಿಜಯೇಂದ್ರ ವರುಣಾ ಕ್ಷೇತ್ರ  ಸ್ಪರ್ಧೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಗೊಂಡು ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಯಡ್ಯೂರಪ್ಪನಿಗೂ ವರುಣ ಕ್ಷೇತ್ರಕ್ಕೂ ಸಂಬಂಧವೇನು. ಅವರು ಬಂದು ನಿಂತ ತಕ್ಷಣ ಜನ ಓ  ಅಂತ ಓಡಿ ಬರ್ತಾರಾ? ನನ್ನ ಮಗ ಚುನಾವಣೆಗೆ ನಿಂತರೂ ಸಿಎಂ ಮಗ ಅಂತ ಓಟಾಕೋದಿಲ್ಲ. ಸಿಎಂ ಆಗಿ  ನಾನು ಏನು ಕೆಲಸ ಮಾಡಿದ್ದೀನಿ ಅನ್ನೋದರ ಮೇಲೆ ಓಟು ಹಾಕ್ತಾರೆ. ವರುಣ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರೋದು ನಾನು. ಆ ಕ್ಷೇತ್ರದಲ್ಲಿ ಕೆಲಸ ಮಾಡಿರೋದು ನಾನು.ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋದಿಲ್ಲ. ಜನರಿಗೆ ಯಾರಿಗೆ ಓಟು ಹಾಕಬೇಕು ಅಂತ ಗೊತ್ತಿದೆ. ಆ ರೀತಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ನಿಂತು ಗೆಲ್ಲೋದಾಗಿದ್ರೆ ಯಾರ್ಯಾರೊ ಎಲ್ಲೆಲ್ಲೊ ನಿಲ್ತಿದ್ರು. ವಿಜಯೇಂದ್ರ ಬಗ್ಗೆ ನನ್ನ ಬಳಿ ಪ್ರಶ್ನೆಯನ್ನು ಕೇಳಲೇಬೇಡಿ ಎಂದರು. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾದ ಪಕ್ಷ. ಕಳೆದ ಮೂರ್ನಾಲ್ಕು ದಿನಗಳಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಯಡಿಯೂರಪ್ಪ ಹಾಗೂ ಕುಮಾರ ಸ್ವಾಮಿರವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಯಾರು ಯಾರನ್ನೂ ಸಹ ಸೋಲಿಸಲು ಸಾಧ್ಯವಿಲ್ಲ. ಮತದಾರರೇ ನಿರ್ಣಾಯಕರು.ಈ ಬಾರಿಯ ಚುನಾವಣೆಯಲ್ಲಿ ನಾವು ಅಭಿವೃದ್ಧಿ ಪರವಾಗಿ ಮತಯಾಚಿಸುತ್ತಿದ್ದೇವೆ. ನಿನ್ನೆ ಬಿಡುಗಡೆ ಮಾಡಿರುವ ಚಾರ್ಜ್ ಶೀಟ್ ನ ಆರೋಪ ಪಟ್ಟಿ ಸುಳ್ಳಿನ ಕಂತೆಯಾಗಿದೆ. ಕಳೆದ ಐದು ವರ್ಷಗಳಿಂದ ಮಾಡದೇ ಇರುವ ಆರೋಪವನ್ನು ಚುನಾವಣಾ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಇದೆಲ್ಲಾ ಚುನಾವಣೆ ಗಿಮಿಕ್. ಕೇಂದ್ರ ಕಾನೂನು ಮಂತ್ರಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ನಾಡಿನ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರೇ ಬಂದು ಸ್ಪರ್ಧಿಸಿದರೂ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸಲಿದೆ ಎಂದರು. ನರೇಂದ್ರ ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ಎಷ್ಟು ಸಾರಿ ಬಂದರೂ ಗೆಲುವು ನಮ್ಮದೇ ಎಂದರು. ಕಾವೇರಿ ನೀರಿಗೆ ಸಂಬಂಧಿಸಿದಂತೆ ತಮಿಳು ನಾಡು ಬಂದ್ ಕರೆಗೆ ಪ್ರತಿಕ್ರಿಯಿಸಿದ ಅವರು ತಮಿಳು ನಾಡು ಸಂಸದರ ಒತ್ತಾಯಕ್ಕೆ ಮಣಿದು ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಬಾರದು. ಕರ್ನಾಟಕ ಸರ್ಕಾರ ಭ್ರಷ್ಟಾಚಾರ ಅನ್ನೋ ಮೋದಿ  ತಮ್ಮ ಸರ್ಕಾರ  ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಅಧಿಕಾರಿಗಳನ್ನು ನೇಮಕ ಮಾಡಿರಲಿಲ್ಲ. ಮೋದಿ ಪ್ರಧಾನಿ ಆಗಿ ನಾಲ್ಕು ವರ್ಷ ವಾದರೂ ಜನ ಲೋಕಪಾಲ್ ಮಸೂದೆ ಜಾರಿಗೆ ತಂದಿಲ್ಲ. ಅವರಿಗೆ ನಮ್ಮ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ಎಂದರು. ಅಂಬರೀಶ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹಾರಿಕೆ ಉತ್ತರ ನೀಡಿದರು. ತಳವಾರ ಮತ್ತು ಪರಿವಾರ ಪರಿಶಿಷ್ಟ ವರ್ಗಕ್ಕೆ ಸೇರಿಸುವ ವಿಚಾರ ಕೇಂದ್ರ ಸರ್ಕಾರಕ್ಕೆ ಅನುಮೋದನೆ ಕಳಿಸಿದ್ದೇ ನಾವು. ನಾವು ಕಳುಹಿಸದೇ ಇದು ಅಂಗೀಕಾರವಾಗತ್ತಾ? ಇದು ಕೇವಲ ಮಂತ್ರಿ ಮಂಡಲದಲ್ಲಿ ಮಾತ್ರ ಒಪ್ಪಿಗೆಯಾಗಿದೆ. ಇನ್ನೂ ರಾಜ್ಯ ಸಭೆ ಲೋಕಸಭೆಯಲ್ಲಿ ಅಂಗೀಕೃತವಾಗಬೇಕಿದೆ. ಚುನಾವಣೆ ಹತ್ತಿರವಾದ ಹಿನ್ನಲೆ ಇದನ್ನು ಜಾರಿಗೆ ತರಲು ಹೊರಟಿದ್ದಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: