
ಕರ್ನಾಟಕ
ಸರ್ಕಾರಿ ವೆಬ್ಸೈಟ್, ಜಾಹೀರಾತು ಫಲಕಗಳಲ್ಲಿ ಭಾವಚಿತ್ರ ತೆರವಿಗೆ ಸೂಚನೆ
ಬೆಂಗಳೂರು (ಏ.2): ಕರ್ನಾಟಕ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ವೆಬ್ಸೈಟ್ಗಳು, ಬ್ಲಾಗ್ಗಳು, ಸಾಮಾಜಿಕ ಜಾಲತಾಣಗಳು ಹಾಗೂ ಜಾಹೀರಾತು ಫಲಕಗಳಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಇದ್ದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಎಲ್ಲ ಇಲಾಖಾ ಮುಖ್ಯಸ್ಥರಲ್ಲಿ ಕೋರಿದ್ದಾರೆ.
ಈ ಕುರಿತು ಮುಖ್ಯ ಚುನಾವಣಾಧಿಕಾರಿಗಳ ಸೂಚನೆಯ ಮೇರೆಗೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದು ರಾಜಕೀಯ ವ್ಯಕ್ತಿಗಳ ಭಾವಚಿತ್ರ ಹೊಂದಿರುವ ಯಾವುದೇ ರೀತಿಯ ಜಾಹೀರಾತುಗಳನ್ನು ತುರ್ತಾಗಿ ತೆರವುಗೊಳಿಸುವಂತೆ ತಿಳಿಸಿದ್ದಾರೆ.
ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಲಾಖೆ/ನಿಗಮ/ಮಂಡಳಿಗಳ ವತಿಯಿಂದ ಪ್ರಕಟಿಸಲಾಗುವ ನಿಯತಕಾಲಿಕೆಗಳು, ಪತ್ರಿಕೆಗಳು, ವಾರ್ತಾ ಪತ್ರಗಳು (News Letter) ಇದ್ದಲ್ಲಿ ಅವುಗಳ ಮೂಲಕ ಸಹ ಮತದಾನ ಜಾಗೃತಿ ಕುರಿತ ಲೇಖನಗಳನ್ನು ಪ್ರಕಟಿಸಲು, ವಿಶೇಷ ಸಂಚಿಕೆಗಳನ್ನು ಹೊರತರಲು ಮನವಿ ಮಾಡಿದ್ದಾರೆ.
ಇಲಾಖೆ/ ನಿಗಮ/ ಮಂಡಳಿಗಳ ಅಧೀನದಲ್ಲಿ ಕ್ಷೇತ್ರ ಪ್ರಚಾರ ವಾಹನಗಳಿದ್ದಲ್ಲಿ, ಅವುಗಳ ಮೂಲಕವೂ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಅವರು ತಿಳಿಸಿದ್ದಾರೆ. (ಎನ್.ಬಿ)