ಮೈಸೂರು

ವಚನ ಚಳುವಳಿಯು ಪ್ರಸ್ತುತ ಕಾಲಘಟ್ಟಕ್ಕೂ ಹೋರಾಟದ ಬಹುದೊಡ್ಡ ಮಾದರಿ : ಶ್ವೇತಾ ಮಡಪ್ಪಾಡಿ ಅಭಿಮತ

ಮೈಸೂರು,ಏ.2:- ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ವಚನ ಚಳುವಳಿಯು ಸಾಮಾಜಿಕವಾದ ಅಸಮಾನತೆ, ತಾರತಮ್ಯಗಳನ್ನು ಪ್ರಶ್ನಿಸಿ ರೂಪುಗೊಂಡ ಹೋರಾಟವಾಗಿದೆ. ಅಕ್ಕಮಹಾದೇವಿಯಂತಹ ದಿಟ್ಟ ಹೆಣ್ಣೊಬ್ಬಳು ಮೊತ್ತಮೊದಲ ಬಾರಿಗೆ ಇಡೀ ಸಮಾಜದ ನಡಾವಳಿಗಳನ್ನು ಮರುವಿಮರ್ಶೆಗೆ  ಒಡ್ಡುತ್ತಾಳೆ. ಈ ಕಾಲಘಟ್ಟದಲ್ಲಿ ನಡೆದ ಹೋರಾಟದ ಭಿನ್ನ ದಾರಿಗಳು ಪ್ರಸ್ತುತ ಸಂದರ್ಭಕ್ಕೂ ಬಹುವಾಗಿ ಅನ್ವಯವಾಗಬಲ್ಲ ಮಾದರಿಗಳಾಗಿವೆ” ಎಂದು ಲೇಖಕಿ ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.

ನಿನ್ನೆ ಬಸವ ಸಮಿತಿ (ರಿ) ಹೆಬ್ಬಾಳು –ವಿಜಯನಗರ ಮೈಸೂರು ಇವರು ವಿಜಯನಗರದ ಬಸವ ಭವನದಲ್ಲಿ ಆಯೋಜಿಸಿದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೆರವೇರಿಸಿ ಮಾತನಾಡಿದರು. ಹನ್ನೆರಡನೆಯ ಶತಮಾನದ ಸಾಮಾಜಿಕ ಆಂದೋಲನವು ಇಡೀ ಭಾರತೀಯ ಸಂದರ್ಭದಲ್ಲಿಯೇ ಒಂದು ಚಾರಿತ್ರಿಕ ಕ್ರಾಂತಿಯಾಗಿದೆ. ತಳಸಮುದಾಯದ ಹಲವು ದನಿಗಳು ಇಲ್ಲಿ ಮಾತನಾಡಲು ತೊಡಗುತ್ತವೆ. ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಮುಂತಾದ ನೂರಾರು ವಚನಕಾರರು ತಮ್ಮ ಅಸ್ತಿತ್ವವನ್ನು ತೋರಿಸಿಕೊಟ್ಟರು. ಶತಮಾನಗಳಿಂದ ನಡೆದುಕೊಂಡು ಬಂದಿದ್ದ ಸಾಮಾಜಿಕ ಅಸಮಾನತೆಗೆ ಹನ್ನೆರಡನೆಯ ಶತಮಾನದಲ್ಲಿ ಒಂದು ವಿಭಿನ್ನ ತಿರುವು ದೊರೆಯಿತು. ಅಕ್ಕನಂತಹ ಸ್ವಾಭಿಮಾನಿಯೊಬ್ಬಳಿಗೆ ತನ್ನ ಆಯ್ಕೆಯಂತೆ ಬದುಕುವುದಕ್ಕೆ ಈ ಕಾಲಘಟ್ಟ ಮಹತ್ತರ ವೇದಿಕೆಯನ್ನೊದಗಿಸಿತು. ಅಕ್ಕಮಹಾದೇವಿ ಕೌಶಿಕನಂಥ ಒಬ್ಬ ರಾಜನ ಆಶ್ರಯವನ್ನು ನಿರಾಕರಿಸಿ ಹೋಗುವಾಗ ಆಕೆಯ ಸ್ವಾಭಿಮಾನ ಎದ್ದು ಕಾಣುತ್ತದೆ. ತನ್ನ ಸ್ವಾತಂತ್ರ್ಯವನ್ನು ತಾನು ಪಡೆದುಕೊಳ್ಳುವುದಕ್ಕಾಗಿ ಅಕ್ಕ ನಡೆಸಿದ ಹೋರಾಟ ಇಂದಿಗೂ ಒಂದು ಪ್ರತೀಕದಂತೆ ನಮ್ಮ ಮುಂದೆ ನಿಲ್ಲುತ್ತದೆ. ಅಕ್ಕ ಅನುಭಾವದ ಪರಾಕಾಷ್ಠೆಯಲ್ಲಿದ್ದಂತೆ ಕಂಡರೂ ಆಕೆಯು ಕೇಳುತ್ತಿದ್ದುದು ತನ್ನ ಆಯ್ಕೆಯಂತೆ ಬದುಕುವ ಅವಕಾಶವನ್ನು. ಇಪ್ಪತ್ತೊಂದನೇ ಶತಮಾನದಲ್ಲೂ ಹೆಣ್ಣು ದಿನಗೂಲಿ ತಾರತಮ್ಯ, ದೈಹಿಕ ಶೋಷಣೆ, ಮಾನಸಿಕ ಅತ್ಯಾಚಾರಗಳ ಸುಳಿಯಿಂದ ಬಿಡುಗಡೆ ಪಡೆಯದೇ  ಸಂಕಷ್ಟ ಎದುರಿಸುತ್ತಲೇ ಇರುವಾಗ ಹನ್ನೆರಡನೇ ಶತಮಾನದಲ್ಲೇ ಒಂಟಿಯಾಗಿ ಸಾಮಾಜಿಕ ಕ್ರಾಂತಿ ಎಬ್ಬಿಸಿದ ಅಕ್ಕಮಹಾದೇವಿ ಅಸಾಮಾನ್ಯ ಶಕ್ತಿಯಾಗಿ ಗೋಚರಿಸುತ್ತಾಳೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಬಸವ ಸಮಿತಿಯ ಅಧ್ಯಕ್ಷ ಹೆಚ್.ವಿ ಬಸವರಾಜು ಹಿನಕಲ್ ಅವರು ಮಾತನಾಡಿ ಅಕ್ಕಮಹಾದೇವಿಯ ಬದುಕು ನಮ್ಮ ಇಂದಿನ ಹೆಣ್ಣು ಮಕ್ಕಳಿಗೂ ಆದರ್ಶವಾಗಲಿ. ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಸದಸ್ಯರು , ಪದಾಧಿಕಾರಿಗಳು, ಹಾಗೂ ಇತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: