ದೇಶಪ್ರಮುಖ ಸುದ್ದಿ

ಸುಪ್ರೀಮ್‍ಕೋರ್ಟ್ ತೀರ್ಪಿನಿಂದ ಎಸ್.ಸಿ, ಎಸ್ಟಿ ಕಾನೂನು ದುರ್ಬಲ: ಕೇಂದ್ರದ ಅಫಿಡವಿಟ್

ನವದೆಹಲಿ (ಏ.2): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲೆ ದೌರ್ಜನ್ಯದ ಆರೋಪ ಕೇಳಿ ಬಂದಾಕ್ಷಣ ಕೇಸು ದಾಖಲಿಸುವ ಮತ್ತು ತತ್‌ಕ್ಷಣವೇ ಆರೋಪಿಗಳನ್ನು ಬಂಧಿಸುವುದಕ್ಕೆ ತಡೆ ಹೇರಿರುವ ಸುಪ್ರೀಂಕೋರ್ಟ್‌ನ ತೀರ್ಪು ಇಡೀ ಕಾಯ್ದೆಯನ್ನೇ ದುರ್ಬಲಗೊಳಿಸಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಕುರಿತು ಇಂದು ಸುಪ್ರೀಮ್‍ ಕೋರ್ಟ್‍ನಲ್ಲಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ನ್ಯಾಯಾಲಯದ ತೀರ್ಪಿನಿಂದಾಗಿ ಕಾನೂನಿನ ಹಿಡಿತ ತಪ್ಪುವುದರ ಜೊತೆಗೆ, ಹಿಂಸಾಚಾರ ಹೆಚ್ಚುವ ಸಾಧ್ಯತೆ ಇದೆ. ಇದರ ಜೊತೆಗೆ ತುಳಿತಕ್ಕೊಳಗಾದ ಸಮುದಾಯಗಳನ್ನು ರಕ್ಷಿಸುವ ಕಾನೂನು ದುರ್ಬಲವಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತನ್ನ ಪುನರ್‌ ಪರಿಶೀಲನಾ ಅರ್ಜಿಯಲ್ಲಿ ಮನವರಿಕೆ ಮಾಡುವ ಯತ್ನ ಮಾಡಿದೆ.

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳನ್ನು ತಕ್ಷಣವೇ ದಾಖಲಿಸಬೇಕು ಮತ್ತು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂಬ ನಿಯಮವನ್ನು ಸುಪ್ರೀಮ್‍ ಕೋರ್ಟ್ ಸಡಿಲಗೊಳಿಸಿ ತೀರ್ಪು ನೀಡಿತ್ತು. ತೀರ್ಪಿಗೆ ಸಂಬಂಧಿಸಿ ಕಳೆದ ವಾರ ಕೇಂದ್ರ ಸಚಿವರುಗಳಾದ ರಾಮ್‌ವಿಲಾಸ್ ಪಾಸ್ವಾನ್ ಮತ್ತು ಥಾವರ್‌ಚಂದ್ ಗೆಹ್ಲೋಟ್ ನೇತೃತ್ವದಲ್ಲಿ ಎನ್‌ಡಿಎ ಸಂಸದರ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಈ ತೀರ್ಪನ್ನು ವಿರೋಧಿಸುವಂತೆ ಮನವಿ ಮಾಡಿತ್ತು.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಖಂಡಿಸಿ ಏ.೨ರಂದು ವಿವಿಧ ದಲಿತ ಸಮುದಾಯಗಳು ಭಾರತ್ ಬಂದ್‌ಗೆ ಕರೆ ನೀಡಿವೆ. ‘ಸಂವಿಧಾನ ಬಚಾವೋ ಸಂಘರ್ಷ ಸಮಿತಿ’ ಬಂದ್‌ಗೆ ಕರೆ ನೀಡಿದ್ದು, ಅನಂತರ ‘ಅಖಿಲ ಭಾರತ ಆದಿ ಧರ್ಮ ಸಾಧು ಸಮಾಜ’ ಮತ್ತಿತರ ದಲಿತ ಸಮುದಾ ಯಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಬಂದ್‌ ಅನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಕಾನೂನು ಸಚಿವಾಲಯ ಮನವಿ ಮಾಡಿದ್ದು, ‘ನರೇಂದ್ರ ಮೋದಿ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದವರ
ಅಭಿವೃದ್ಧಿಗೆ ಬದ್ಧವಾಗಿದ್ದು, ಸುಪ್ರೀಮ್ ಆದೇಶವನ್ನು ಪುನರ್ ಪರಿಶೀಲಿಸಲಾಗುತ್ತದೆ ಎಂದು ಟ್ವೀಟ್ ಮಾಡಿದೆ. (ಎನ್.ಬಿ)

Leave a Reply

comments

Related Articles

error: