ಮೈಸೂರು

ಸಿದ್ಧಗಂಗಾ ಶ್ರೀಗಳ ಜಯಂತಿಯನ್ನು ಸಾರ್ವತ್ರಿಕವಾಗಿ ಆಚರಿಸುವಂತೆ ಒತ್ತಾಯ

ಅಗ್ರಹಾರದ ವೃತ್ತದಲ್ಲಿ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ ಆಗ್ರಹ

ಮೈಸೂರು, ಏ.2 : ತ್ರಿವಿಧ ದಾಸೋಹಿ ತುಮಕೂರು ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 111 ನೇ ಜನ್ಮದಿನವನ್ನು ಏಪ್ರಿಲ್ 1ರಂದು ಸರಕಾರದ ಮಟ್ಟದಲ್ಲಿ ಆಚರಿಸಬೇಕು. ಹಾಗೆಯೇ ಸಾರ್ವತ್ರಿಕವಾಗಿ ಎಲ್ಲಾ ಕಚೇರಿ ಹಾಗೂ ಕಾರ್ಖಾನೆಗಳಲ್ಲಿ ಸ್ವಾಮೀಜಿ ಅವರ ಜಯಂತಿಯನ್ನು ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ಸೇವಾ ಸಮಿತಿ ಒತ್ತಾಯಿಸಿದೆ.

ಸಿದ್ದಗಂಗಾಶ್ರೀಗಳು 12ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣ ಅವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಶ್ರೀಗಳು 1930ರ ಮಾ.3 ರಂದು ಸಿದ್ಧಗಂಗಾ ಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಸಮಾಜದ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮಗಳು ಮತ್ತು ಸಮಾಜದ ಏಳಿಗೆಗೆ ಶ್ರಮಿಸುತ್ತಾ ಬಂದಿದ್ದಾರೆ. ಇವರ ಧರ್ಮಾತೀತ, ಜಾತ್ಯತೀತ ಶಿಕ್ಷಣವನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಶ್ರೀಗಳ 100 ನೇವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಕರ್ನಾಟಕ ಸರಕಾರವು ಶ್ರೀಗಳ ಜೀವಮಾನ ಸೇವೆಯನ್ನು ಪರಿಗಣಿಸಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮತ್ತು 2015ರಲ್ಲಿ ಭಾರತ ಸರಕಾರವು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಶಾಂತ ಮಹದೇವಪ್ರಸಾದ್ ಕೆ.ಪಿ. ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದ ಅಗ್ರಹಾರದ ವಾಣಿವಿಲಾಸ ಮಾರ್ಕೆಟ್ ವೃತ್ತದಲ್ಲಿ ಸಿದ್ದಗಂಗಾ ಶ್ರೀಗಳ ಪುತ್ಥಳಿಯನ್ನು ಮಹಾನಗರಪಾಲಿಕೆ ನಿರ್ಮಿಸಬೇಕೆಂದು ಅವರು ಒತ್ತಾಯಿಸಿದರು.

ಒಂದು ವೇಳೆ ಮಹಾನಗರಪಾಲಿಕೆಯು ಇದನ್ನು ನಿರ್ಮಿಸಲು ತೊಂದರೆ ಇದ್ದರೆ,  ನಮ್ಮ ಸಂಸ್ಥೆಯೇ ಇದನ್ನು ನಿರ್ಮಿಸಲು ಸಿದ್ದವಿರುತ್ತದೆ. ಅದಕ್ಕೆ ನಗರಪಾಲಿಕೆಯು ಒಪ್ಪಿಗೆ ಪತ್ರವನ್ನು ನೀಡಿದರೆ ಸಾಕು ಎಂದ ಅವರು ಈ ಕಾರ‍್ಯವು ಶ್ರೀಗಳ ಮುಂದಿನ ವರ್ಷದ ಹುಟ್ಟುಹಬ್ಬದ ದಿನಾಚರಣೆಯೊಳಗೆ ನಡೆಯಬೇಕೆಂದು ಮನವಿ ಮಾಡಿದರು.

ಸಮಿತಿಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಬಿ.ಎಸ್.ಗೀತಾ ಗಣೇಶ್, ಮಾರ್ಗದರ್ಶಕರಾದ ಹಳೇಪುರ  ಗಿರೀಶ್, ಪ್ರಧಾನ ಕಾರ‍್ಯದರ್ಶಿ ದೀಪಕ್‌ಕುಮಾರ್. ಬಿ.ಎಂ. ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: