ದೇಶಪ್ರಮುಖ ಸುದ್ದಿ

ಕಾವೇರಿ ನಿರ್ವಹಣಾ ಮಂಡಳಿಗಾಗಿ ತ.ನಾಡಿನಲ್ಲಿ ತೀವ್ರಗೊಂಡ ಪ್ರತಿಭಟನೆ

ಚೆನ್ನೈ (ಏ.2): ಫೆ.16ರ ಸುಪ್ರೀಂಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ಸರಕಾರ ವಿಫಲ ವಾಗಿದೆಯೆಂದು ಆರೋಪಿಸಿ ತಮಿಳುನಾಡಿನಾದ್ಯಂತ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ರಾಜಧಾನಿ ಚೆನ್ನೈನಲ್ಲಿ ವಿರೋಧ ಪಕ್ಷಗಳ ಪ್ರಮುಖ ಮುಖಂಡರ ನೇತೃತ್ವದಲ್ಲಿ ಹಲವಾರು ಧರಣಿ, ಪ್ರತಿಭಟನೆ ನಡೆದವು. ಕೊಯಮತ್ತೂರಿನಲ್ಲಿ  ಪ್ರತಿಭಟನೆಯ ಸಂದರ್ಭದಲ್ಲಿ ಡಿಎಂಕೆ ಪಕ್ಷದ ಇಬ್ಬರು ಕಾರ್ಯಕರ್ತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೈಮೇಲೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಡಿಎಂಕೆ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾವೇರಿ ಜಲನಿರ್ವಹಣಾ ಮಂಡಳಿ(ಸಿಎಂಬಿ)ಯನ್ನು ತಕ್ಷಣವೇ ರಚಿಸಬೇಕೆಂದು ಆಗ್ರಹಿಸಿ ರೈತರು ಹಾಗೂ ಕೆಲವು ಸಂಘಟನೆಗಳ ಕಾರ್ಯಕರ್ತರು ಕೊಯಮತ್ತೂರು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಇಷ್ಟೇ ಅಲ್ಲದೆ ಕಾವೇರಿ ಜಲನಿರ್ವಹಣಾ ಮಂಡಳಿ ರಚನೆ ವಿಳಂಬವನ್ನು ಪ್ರತಿಭಟಿಸಿ ಇಂದು ತಮಿಳುನಾಡಿನಾದ್ಯಂತ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ರಸ್ತೆ ತಡೆ ನಡೆಸಿದ್ದಾರೆ. ಕೇಂದ್ರ ಸರಕಾರವು ತಕ್ಷಣವೇ ಸಿಎಂಬಿ ರಚಿಸಬೇಕೆಂದು ಆಗ್ರಹಿಸಿ, ಡಿಎಂಕೆ ನೇತೃತ್ವದ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದಾರೆ. ಸಿಎಂಬಿ ರಚನೆಯಾಗುವವರೆಗೆ ರಾಜ್ಯದಾದ್ಯಂತ ನಿರಂತರವಾಗಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಡಿಎಂಕೆ ಘೋಷಿಸಿದೆ.

ಸುಪ್ರೀಂಕೋರ್ಟ್ ಫೆಬ್ರವರಿ 16ರಂದು ನೀಡಿದ ತೀರ್ಪಿನಲ್ಲಿ ಕಾವೇರಿ ನದಿ ನೀರಿನಲ್ಲಿ ಕರ್ನಾಟಕದ ಪಾಲನ್ನು 270 ಟಿಎಂಸಿ ಅಡಿಗೆ ಏರಿಸಿತ್ತು ಹಾಗೂ ತಮಿಳುನಾಡಿನ ಕಾವೇರಿ ನದಿ ನೀರಿನಲ್ಲಿ ತಮಿಳುನಾಡಿನ ಪಾಲನ್ನು ಕಡಿಮೆಗೊಳಿಸಿತ್ತು. ತನ್ನ ಆದೇಶವನ್ನು ಜಾರಿಗೊಳಿಸುವುದನ್ನು ಖಾತರಿಪಡಿಸಲು ಕಾವೇರಿ ನೀರು ಹಂಚಿಕೆಗೆ ವ್ಯವಸ್ಥೆಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ರು ವಾರಗಳ ಕಾಲಾವಕಾಶ ನೀಡಿತ್ತು. ಮಾರ್ಚ್ 29ಕ್ಕೆ ಈ ಗಡುವು ಕೊನೆಗೊಂಡ ಕಾರಣ ತಮಿಳುನಾಡು ಸರ್ಕಾರ ಕೇಂದ್ರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ. ಪ್ರತಿಪಕ್ಷಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿವೆ.(ಎನ್.ಬಿ)

Leave a Reply

comments

Related Articles

error: