ಮೈಸೂರು

“ಪ್ರೊ. ಎಸ್. ನಂಜುಂಡಯ್ಯನವರಿಗೆ ಶ್ರೀ ನಟರಾಜ ಪ್ರತಿಷ್ಠಾನದಲ್ಲಿ ನುಡಿ ನಮನ”

ಮೈಸೂರು,ಏ.2:- ಶ್ರೀ ನಟರಾಜ ಪ್ರತಿಷ್ಠಾನದ ಎಲ್ಲಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಭಾನುವಾರ ನಿಧನರಾದ ಮೈಸೂರಿನ ಮಹಾರಾಜ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್. ನಂಜುಂಡಯ್ಯನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.

ನಿನ್ನೆ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕೆ.ಪಿ.ಟಿ.ಸಿ.ಎಲ್‍ನ ಮುಖ್ಯ ಅಭಿಯಂತರ ಶಂಕರ್ ದೇವನೂರು ಮಾತನಾಡಿ, ಈ ಚಲನಾತ್ಮಕ ಜಗತ್ತಿನಲ್ಲಿ ಎಲ್ಲರಿಗೂ ಎಲ್ಲವೂ ಗೊತ್ತು. ಆದರೆ ಯಾರಿಗೂ ಗೊತ್ತಿಲ್ಲದ ವಿದ್ಯೆ ಎಂದರೆ ಸಾವು. ನಾನು ಹೇಗೆ, ಎಲ್ಲಿ ಯಾವಾಗ ಸಾಯುತ್ತೇನೆಂದು ಯಾರಿಗೂ ತಿಳಿದಿರುವುದಿಲ್ಲ. ಈ ದೃಷ್ಟಿಯಲ್ಲಿ ಶರಣರು ಹೇಳುವುದು. “ಆವ ವಿದ್ಯೆಯನ್ನಾದರೂ ಅರಿಯಬಹುದು, ಸಾವ ವಿದ್ಯೆಯನ್ನು ಅರಿಯಲಾಗದು ನೋಡಾ” ಎಂದರು. ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್. ನಂಜುಂಡಯ್ಯನವರು ನಮ್ಮ ನಾಡಿನ ಹೆಸರಾಂತ ವಿದ್ವಾಂಸರಾಗಿ, ಪ್ರವಚನಕಾರರಾಗಿ ಮಹಾರಾಜ ಕಾಲೇಜಿನಲ್ಲಿ ಮೂರು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸಾವಿರಾರು ಶಿಷ್ಯಕೋಟಿಯನ್ನು ಕನ್ನಡ ಹಣತೆಯಲ್ಲಿ ಬೆಳಗಿದರು. ‘ಸತ್ತವರ ನೆನಪು ಇದ್ದವರ ಸ್ಮರಣೆಯಲ್ಲಿ’ ಎಂಬಂತೆ ಅವರು ನಮ್ಮಿಂದ ದೂರವಾಗಿಲ್ಲ. ಸದಾ ಸಾಹಿತ್ಯದ ವಚನ-ವ್ಯಾಖ್ಯಾನದ ಬೆಳಕಿನಲ್ಲಿ ಇರುತ್ತಾರೆ. ನಂಜುಂಡಯ್ಯನವರು ವ್ಯಾಖ್ಯಾನಿಸಿದ ರನ್ನನ ‘ಗದಾಯುದ್ಧದ ಸ್ಮಶಾನ ಕುರುಕ್ಷೇತ್ರದ ಒಂದು ತುಣಕನ್ನು ಹೇಳಿ ರನ್ನನು ಯುದ್ಧದ ಪರಿಕರಗಳನ್ನು ಅರಿವಿನ ಸಂಕೇತವಾಗಿ ಹೇಗೆ ಬಳಸಿಕೊಂಡ ಎಂಬುದನ್ನು ಮಾರ್ಮಿಕವಾಗಿ ಹೇಳಿದರು. ‘ಜ್ಯೋತಿ ತಾನು ಆರುವ ಮುನ್ನ ಇನ್ನೊಂದನ್ನು ಬೆಳಗಿ ಆರುತ್ತದೆ. ಅದು ದೀಪದ ವೈಶಿಷ್ಟ್ಯ. ಹಾಗೆ ತಾವು ಆರುವ ಪೂರ್ವದಲ್ಲಿ ಸಾವಿರಾರು ಶಿಷ್ಯ ವೃಂದವನ್ನು ಪ್ರೊ. ಎಸ್. ನಂಜುಂಡಯ್ಯ ಬೆಳಗಿಸಿ ಹೋಗಿದ್ದಾರೆ. ಇದು ಅವರ ಬದುಕಿನ ವೈಶಿಷ್ಟ್ಯ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೊಸಮಠದ ಅಧ್ಯಕ್ಷರಾದ ನಿ.ಪ್ರ.ಸ್ವ. ಚಿದಾನಂದ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಶೈಕ್ಷಣಿಕ ಸಂಯೋಜಕರಾದ ಪ್ರೊ. ಎನ್. ಸತ್ಯನಾರಾಯಣರವರು ಮಾತನಾಡಿ ಪ್ರೊ. ಎಸ್. ನಂಜುಂಡಯ್ಯನವರ ಸಾತ್ವಿಕ ಮನಸ್ಸನ್ನು ಕಾರ್ಯಚಟುವಟಿಕೆಯ ರೀತಿಯನ್ನು ಸ್ಮರಿಸಿಕೊಂಡರು. ಕಾರ್ಯಕ್ರಮಕ್ಕೂ ಮುನ್ನ ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥರಾದ ಜಿ. ಪ್ರಸಾದಮೂರ್ತಿ ಪ್ರೊ. ಎಸ್. ನಂಜುಂಡಯ್ಯರವರನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾರಾಣಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀ ನಟರಾಜ ಪ್ರತಿಷ್ಠಾನದ ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: