ಮೈಸೂರು

ಗುತ್ತಿಗೆದಾರನಿಂದ ಅನ್ಯಾಯ, ಬೆದರಿಕೆ ವಿರೋಧಿಸಿ ಪ್ರತಿಭಟನೆ

ಮೈಸೂರು,ಏ.4:- ಮೈಸೂರಿನ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯಲ್ಲಿ ಸಾವಿರಾರು ನೌಕರರು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದು, ಇವರಲ್ಲಿ ಸರಿಸುಮಾರು 3500-4000 ಕಾರ್ಮಿಕರು ಗುತ್ತಿಗೆ ಕಾರ್ಮಿಕರಾಗಿ ಹಲವಾರು ವರ್ಷಗಳಿಂದ ಕೆಲಸ ನರ್ವಹಿಸುತ್ತಿದ್ದಾರೆ. 250 ಕಾರ್ಮಿಕರು ಕಳೆದ 10-15ವರ್ಷಗಳಿಂದ ಗಾರ್ಡನಿಂಗ್ ನಿರ್ವಹಣೆಯಲ್ಲಿ ವರ್ಷದ ಹನ್ನೆರಡು ತಿಂಗಳು ದುಡಿಯುತ್ತಿದ್ದಾರೆ. ಸಂಸ್ಥೆಯು ತಮಿಳುನಾಡಿನ ಚೆನ್ನೈ ಮೂಲದ ಮಾಸ್ಟರ್ ಪ್ಲಾನ್ ಎಂಬ ಗುತ್ತಿಗೆದಾರ ಸಂಸ್ಥೆಗೆ ಜವಾಬ್ದಾರಿ ವಹಿಸಿದ್ದು, ಕೆಲಸಗಾರರಿಗೆ ರಾಜ್ಯ ಸರ್ಕಾರ ನಿಗದಿಪಡಿಸಿರುವ ಕನಿಷ್ಟಕೂಲಿ ಬಿಟ್ಟರೆ ಬೇರೆ ಯಾವುದೇ ಸವಲತ್ತುಗಳು ದೊರೆಯುತ್ತಿಲ್ಲ. ಗುತ್ತಿಗೆದಾರನಿಂದ ಕಿರುಕುಳವಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು.

ನಿನ್ನೆ ಸಂಸ್ಥೆಯ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನಮಗೆ ಗುತ್ತಿಗೆದಾರರು ಬೆದರಿಕೆಯೊಡ್ಡುತ್ತಿದ್ದಾರೆ. ರಾಜೀನಾಮೆ ನೀಡಲು ನಿರಾಕರಿಸಿದವರಿಗೆ ಒಂದನೇ ಏಪ್ರೀಲ್ 2018ರಿಂದ ಕೆಲಸ ನಿರಾಕರಣೆ ಮಾಡಲಾಗುವುದು ಎಂದು ಬೆದರಿಕೆಯೊಡ್ಡುತ್ತಿದ್ದಾರೆ. ನಮಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶೇಷಾದ್ರಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: