ಮೈಸೂರು

ಕಲೆಗಳನ್ನು ಪ್ರೋತ್ಸಾಹಿಸಿ ಉಳಿಸುವ ಕೆಲಸವಾಗಬೇಕು : ಬಿ.ಸಿದ್ದರಾಜು

ನಶಿಸುತ್ತಿರುವ ಪ್ರಾಚೀನ ಕಲೆಗಳನ್ನು ಪ್ರೋತ್ಸಾಹಿಸಿ, ಪುರಾತನ ಸಂಸ್ಕೃತಿಯನ್ನು ಉಳಿಸುವ ಕೆಲಸವಾಗಬೇಕು ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು ತಿಳಿಸಿದರು.

ಮೈಸೂರಿನ ವಿಜಯನಗರದಲ್ಲಿರುವ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಯುವ ಕಲಾವಿದೆ ಕೆ.ಸ್ವಾತಿ ಅವರ ಯಕ್ಷಾಕೃತಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಬಿ.ಸಿದ್ದರಾಜು  ಮಂಗಳವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂದಿನ ಪೋಷಕರು ಮಕ್ಕಳಲ್ಲಿ ಕಲೆಯನ್ನು ನಿಮ್ಮ ಜೀವನದ ವೃತ್ತಿಯನ್ನಾಗಿ ಆಯ್ದುಕೊಳ್ಳಿ ಎಂದು ಹೇಳುವುದಿಲ್ಲ. ಡಾಕ್ಟರ್, ಇಂಜಿನಿಯರ್ ಗಳಾಗುವಂತೆ ಒತ್ತಾಯಿಸುತ್ತಾರೆ. ಹೀಗಿದ್ದಾಗ ಕಲೆ ಬೆಳೆಯುವುದು ಹೇಗೆ ಎಂದು ಪ್ರಶ್ನಿಸಿದರು. ವಿಶ್ವವಿದ್ಯಾನಿಲಯಗಳಲ್ಲಿ ಚಿತ್ರಕಲೆಯ ಕುರಿತು ಐದು ವರ್ಷದ ಕೋರ್ಸ್ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇಂತಹ ಪದವಿಗೆ ಬಂದು ಕಲೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದರು. ದೇಶಿ ಸಂಸ್ಕೃತಿ ಮರೆತು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಹಳೆಯ ಶಿಲ್ಪಕಲೆಗಳಿಗೆ ಇಂದು ಬೆಲೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನ ಯುವ ಪೀಳಿಗೆ ಹಿಂದಿನವರು ಬಿಟ್ಟು ಹೋದ ಕಲೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು  ಎಂದು ಸಲಹೆ ನೀಡಿದರು.

ಕಾವಾ ಕಲಾ ಕಾಲೇಜಿನ ಡೀನ್ ಬಸವರಾಜ್ ಮುಸವಳಿಗೆ ಮಾತನಾಡಿ ಯುವ ಪೀಳಿಗೆ ಕಲೆಗಳನ್ನು ಮರೆಯಬಾರದು. ಕಲೆಗಳನ್ನು ಬೆಳೆಸಲು ಪ್ರಯತ್ನಿಸಬೇಕು.  ತಮ್ಮ ಭಾವನೆಗಳನ್ನು ಬಣ್ಣದ ರೂಪದಲ್ಲಿ ವ್ಯಕ್ತ ಪಡಿಸುವ ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.

ಈ ಸಂದರ್ಭ ಕಲಾ ಶಾಲೆಯ ಪ್ರಾಚಾರ್ಯ ಕೆ.ಸಿ.ಮಹದೇವಶೆಟ್ಟಿ, ಸಂಚಾಲಕ ವಿಠಳರೆಡ್ಡಿ ಚುಳುಕಿ, ಪ್ರಾಧ್ಯಾಪಕ ರಾಜಶೇಖರ್ ಕಲಾವಿದೆ ಸ್ವಾತಿ ಮತ್ತಿತರರು ಉಪಸ್ಥಿತರಿದ್ದರು. 30ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ

Leave a Reply

comments

Related Articles

error: