ದೇಶ

ಆದಾಯ ತೆರಿಗೆ ಕಾಯಿದೆ ತಿದ್ದುಪಡಿ ಮಸೂದೆ ಅಂಗೀಕಾರ

ಕಾಳಧನಿಕರಿಗೆ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳಲು ಮತ್ತೊಂದು ಅವಕಾಶ ನೀಡುವುದಕ್ಕಾಗಿ ಕೇಂದ್ರ ಸರಕಾರ ಮಂಡಿಸಿದ್ದ ಆದಾಯ ತೆರಿಗೆ ಕಾಯಿದೆ ತಿದ್ದುಪಡಿ ಮಸೂದೆ 2016 ಅನ್ನು ಮಂಗಳವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಪ್ರತಿಪಕ್ಷಗಳ ಗದ್ದಲದ ನಡುವೆಯೂ ಯಾವುದೇ ಚರ್ಚೆ ಇಲ್ಲದೆ, ಆದಾಯ ತೆರಿಗೆ ಕಾಯಿದೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ.

ಕಪ್ಪುಹಣದ ಮೇಲೆ ತೆರಿಗೆ ಮತ್ತು ದಂಡ ವಿಧಿಸಲು ಕೇಂದ್ರ ಸರಕಾರವು ತೆರಿಗೆ ಕಾಯಿದೆಗೆ ತಿದ್ದುಪಡಿ ತಂದಿದ್ದು, ಕಪ್ಪುಹಣದ ಮೇಲೆ ಶೇ.30ರಿಂದ 80ರಷ್ಟು ತೆರಿಗೆ ಮತ್ತು ದಂಡ ವಿಧಿಸಲು ಅವಕಾಶವಿದೆ.

ಪ್ರಧಾನಿ ನರೇಂದ್ರ ಮೋದಿಯವರು 500 ಮತ್ತು 1000 ರು. ನೋಟು ರದ್ದುಗೊಳಿಸಿದ ಮೂರು ವಾರಗಳ ನಂತರ ವಿತ್ತ ಸಚಿವ ಅರುಣ್‍ ಜೇಟ್ಲಿ ಅವರು ಆದಾಯ ತೆರಿಗೆ ಕಾಯಿದೆಯ ತಿದ್ದುಪಡಿ ಮಸೂದೆಯನ್ನು ಸೋಮವಾರದಂದು ಸಂಸತ್ತಿನಲ್ಲಿ ಮಂಡಿಸಿದ್ದರು.

ಕಪ್ಪು ಕುಳಗಳು ಘೋಷಿಸುವ ಹಣದ ಶೇ.25ರಷ್ಟನ್ನು ಬಡತನ ನಿಗ್ರಹ ಯೋಜನೆಗಳಡಿ ಕಡ್ಡಾಯವಾಗಿ, ನಿಬಡ್ಡಿಯಾಗಿ ಮತ್ತು ನಾಲ್ಕು ವರ್ಷಗಳ ಅವಧಿಯ ಬೀಗಮುದ್ರೆಗೆ ಒಳಪಡುವ, ನಿರ್ಬಂಧಗಳನ್ನು ಈ ತಿದ್ದುಪಡಿಯಲ್ಲಿ ಕಲ್ಪಿಸಲಾಗಿದೆ.

2016ರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ತಮ್ಮ ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಪಾವತಿಸಬೇಕಾಗುವುದು.

ಕಪ್ಪುಹಣವನ್ನು ಘೋಷಿಸಿಕೊಳ್ಳದ ಕಾಳಧನಿಕರು ಶೇ.60 ತೆರಿಗೆ ಮತ್ತು ಶೇ.25 ತೆರಿಗೆ ಮೇಲಿನ ಸರ್ಚಾರ್ಜ್‌ (ಶೇ.15ರ ಪ್ರಮಾಣದಲ್ಲಿ) ಪಾವತಿಸಬೇಕಾಗುವುದು ಮತ್ತು ಇದು ಒಟ್ಟಾಗಿ ಶೇ.75 ಆಗುವುದು. ಇದರ ಜತೆಗೆ ಒಂದೊಮ್ಮೆ ಅಸೆಸಿಂಗ್‌ ಅಧಿಕಾರಿಯು ತಪ್ಪುಗಾರ ಕಾಳಧನಿಕನಿಗೆ ಶೇ.10ರ ಹೆಚ್ಚುವರಿ ದಂಡ ವಿಧಿಸಬಹುದಾಗಿದೆ ಎಂದು ತೀರ್ಮಾನಿಸಿದಲ್ಲಿ, ಶೇ.75 ತೆರಿಗೆಗೆ ಹೆಚ್ಚುವರಿಯಾಗಿ ಅದನ್ನು ಪಾವತಿಸಬೇಕಾಗುವುದು.

Leave a Reply

comments

Related Articles

error: