
ಮೈಸೂರು
ಕುದಿಯುವ ಸಾಂಬಾರ್ ಪಾತ್ರೆಗೆ ಬಿದ್ದ ಮಗು ಸಾವು
ಕುದಿಯುವ ಸಾಂಬಾರ್ ಪಾತ್ರೆಯೊಳಗೆ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದ ಹರ್ಷ(3) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾನೆ.
ವಿಜಯನಗರದ ವಿಬಿ ಫುಡ್ ಕೋರ್ಟ್ ಹೋಟೆಲ್ ಉದ್ಯೋಗಿಯಾದ ಕವಿತಾ ಅವರ ಮಗುವೇ ಮೃತಪಟ್ಟ ದುರ್ದೈವಿ. ಕುಂಬಾರಕೊಪ್ಪಲಿನ ನಿವಾಸಿಗಳಾದ ಮಹದೇವಚಾರಿ ಮತ್ತು ಕವಿತಾ ದಂಪತಿ ಪುತ್ರ ಹರ್ಷ ನ.26ರಂದು ಹೋಟೆಲ್ನಲ್ಲಿ ಕುದಿಯುವ ಸಾಂಬಾರ್ ಪಾತ್ರೆಗೆ ಬಿದ್ದು ತೀವ್ರ ಸುಟ್ಟಗಾಯಗಳಾಗಿದ್ದು ಈತನನ್ನು ಚಿಕಿತ್ಸೆಗೆಂದು ಮೊದಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕೆ.ಆರ್.ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರುದಿನಗಳಿಂದ ತೀವ್ರ ಸುಟ್ಟಗಾಯಗಳಿಂದ ನರಳುತ್ತಾ ಸಾವು ಬದುಕಿನ ಹೋರಾಟವನ್ನು ನಡೆಸಿದ್ದ ಮಗು ಕೊನೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದೆ. ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮಗುವನ್ನು ಪೋಷಕರ ಸುಪರ್ದಿಗೆ ನೀಡಲಾಯಿತು.
ಪರಿಹಾರ: ಹೋಟೆಲ್ನಲ್ಲಿ ಪಾತ್ರೆ ತೊಳೆಯುವ ಕಾಯಕ ಮಾಡುತ್ತಿದ್ದ ಕವಿತಾ, ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವರು ಯಾರು ಇಲ್ಲವೆಂದು ತನ್ನ ಜೊತೆಯಲ್ಲಿ ಕರೆತರುತ್ತಿದ್ದಳು. ಅಂದು (29) ಮಗು ಆಟವಾಡುತ್ತಾ ಅಡುಗೆ ಕೋಣೆಗೆ ತೆರಳಿದೆ ಆಕಸ್ಮಿಕವಾಗಿ ಕುದಿಯುವ ಸಾಂಬಾರ್ ಪಾತ್ರೆಗೆ ಬಿದ್ದ ಪರಿಣಾಮ ಮೃತಪಟ್ಟಿದ್ದು ಪೋಷಕರು ಸ್ಥಳೀಯರ ನೆರವಿನೊಂದಿಗೆ ಮಗುವಿನ ಶವದೊಂದಿಗೆ ಪರಿಹಾರಕ್ಕೆ ಒತ್ತಾಯಿಸಿ ಮಂಗಳವಾರ ಹೋಟೆಲ್ ಮುಂಭಾಗ ಧರಣಿ ಕುಳಿತರು. ಪರಿಸ್ಥಿತಿ ಅವಲೋಕಿಸಿದ ಮಾಲೀಕ ಪ್ರದೀಪ್ 2 ಲಕ್ಷ ರೂಪಾಯಿ ಮೊತ್ತವನ್ನು ಪರಿಹಾರ ರೂಪವಾಗಿ ನೀಡಲು ಒಪ್ಪಿಗೆ ಸೂಚಿಸಿದ್ದು ಶವಸಂಸ್ಕಾರಕ್ಕೆ 10 ಸಾವಿರ ಮುಂಗಡ ರೂ. ನೀಡಿದ್ದಾರೆ. ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣ್ಗೌಡ, ಪುನೀತ್ಗೌಡ ಟಿವಿಎಸ್ ರಮೇಶ್ ಹಾಗೂ ಇತರ ಸ್ಥಳೀಯರು ಪೋಷಕರಿಗೆ ಬೆಂಬಲ ನೀಡಿದ್ದರು.