ಮೈಸೂರು

ರಸ್ತೆ ಅಗೆದು ನಿರ್ಮಾಣ ಮಾಡದೇ ನಿರ್ಲಕ್ಷ್ಯ ವಹಿಸಿರುವುದಕ್ಕೆ ಖಂಡನೆ : ಪ್ರತಿಭಟನೆ

ಮೈಸೂರು,ಏ.5:- ನಂಜನಗೂಡು  ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು 6ನೇ ಕ್ರಾಸ್ ರಸ್ತೆಯನ್ನು ನಿರ್ಮಾಣ ಮಾಡಲು 6 ತಿಂಗಳಿನ ಹಿಂದೆಯೇ ಅಗೆದು ರಸ್ತೆ ನಿರ್ಮಾಣ ಮಾಡದೇ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ವಾಹನ ಚಾಲಕರು ನೀರಿನ ಹಳ್ಳದಲ್ಲಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ರಸ್ತೆ ನೆಪದಲ್ಲಿ ಅಗೆದ ಗುಂಡಿಗಳನ್ನು ಮುಚ್ಚದೇ ಹಾಗೇ ಬಿಟ್ಟಿದ್ದಾರೆ. ಮಳೆ ನೀರು ನಿಂತು ವಿದ್ಯಾರ್ಥಿಗಳು, ವಾಹನಗಳು ಓಡಾಡಲು ತೊಂದರೆ ಉಂಟಾಗಿದೆ ಎಂದು ಸಾರ್ವಜನಿಕರು ಹಾಗೂ ವಾಹನ ಚಾಲಕರು ನೀರಿನ ಹಳ್ಳದಲ್ಲಿ ವಾಹನ ನಿಲ್ಲಿಸಿ ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

6ನೇ ಕ್ರಾಸ್ ರಸ್ತೆಯು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಹಾಗೂ ರೈಲ್ವೆ ಸ್ಟೇಷನ್ ಹತ್ತಿರದ ಲಿಂಕ್ ರಸ್ತೆಯಲ್ಲಿದೆ. ಇಲ್ಲಿ ಪ್ರತಿದಿನ ಶಾಲಾ ವಿದ್ಯಾರ್ಥಿಗಳು ಬಸ್ ಸ್ಟ್ಯಾಂಡ್ ಹಾಗೂ ರೈಲ್ವೆ ಸ್ಟೇಷನ್‍ಗೆ ಬರುವವರು, ಸಾರ್ವಜನಿಕರು ಪ್ರತಿನಿತ್ಯ ಓಡಾಡುತ್ತಾರೆ. ಆದರೆ ರಸ್ತೆ ನೆಪದಲ್ಲಿ ಅಗೆದ ಗುಂಡಿಗಳನ್ನು ಮುಚ್ಚದೇ ಹಾಗೇ ಬಿಟ್ಟ ಹಿನ್ನೆಲೆಯಲ್ಲಿ ಎರಡು ದಿನದಿಂದ ಸಾಧಾರಣ ಮಳೆ ಯಾಗುತ್ತಿದೆ. ಇದರಿಂದ ಗುಂಡಿಯಲ್ಲಿ  ನೀರು ನಿಂತಿದೆ, ಹರಿಯಲು ಯಾವುದೇ ಜಾಗವಿಲ್ಲ. ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನಗಳು  ಗುಂಡಿಯನ್ನು ದಾಟಲು ಹೋಗಿ ಕೈ ಕಾಲು ಮುರಿದು ಕೊಳ್ಳುವ ಸ್ಥಿತಿ ಉಂಟಾಗಿದೆ. ಸಂಬಂಧ ಪಟ್ಟವರಿಗೆ  ಅನೇಕ ಬಾರಿ  ವಿಷಯ ತಿಳಿಸಿದರೂ  ಕೂಡ ಬೇಜವಾಬ್ದಾರಿತನ ತಾಳಿದ್ದಾರೆ. ಮುಂದಿನ ದಿನಗಳಲ್ಲಿ ಆಗುವಂತಹ ಅನಾಹುತಕ್ಕೆ ಸಂಬಂಧಿಸಿದವರೇ  ನೇರ ಹೊಣೆಯಾಗುತ್ತಾರೆ. ತಕ್ಷಣ  ಗುಂಡಿಯನ್ನು ಮುಚ್ಚಿ  ಮುಂದೆ ಸಂಭವಿಸಬಹುದಾದ  ಅನಾಹುತವನ್ನು ತಪ್ಪಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ತಕ್ಷಣ ಮುಚ್ಚದಿದ್ದರೆ ಈ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಹದೇವು, ರಮೇಶ್, ಮಣಿ,  ಕೃಷ್ಣ, ಗುಂಡ, ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: