ಮೈಸೂರು

ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ 17ನೇ ರಾಷ್ಟ್ರೀಯ ಜಂಬೋರಿ ಕಾರ್ಯಕ್ರಮದ ಆಯೋಜನೆಗೆ ರಸ್ತೆ ಕಾಮಗಾರಿಗಳು, ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಂಡು ಬೇಗ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಿ. ರಂದೀಪ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಿಮ್ಮಾವು ಸಮೀಪ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಈ ಕಾರ್ಯಕ್ರಮಕ್ಕೆ ಟೌನ್‍ಶಿಪ್ ಮಾದರಿಯಲ್ಲಿ ಎಲ್ಲ ಮೂಲಸೌಲಭ್ಯವನ್ನು ಒದಗಿಸಬೇಕು. ಸುಮಾರು 25 ಸಾವಿರ ವಿದ್ಯಾರ್ಥಿಗಳು, ಸುಮಾರು 5 ಸಾವಿರ ಪಾಲಕರು, ಶಿಕಷಕರು ದೇಶದ ಎಲ್ಲ ರಾಜ್ಯಗಳಿಂದ ಆಗಮಿಸುತ್ತಿದ್ದು, ಅವರಿಗೆ ಡಿ.29ರಿಂದ ಜನವರಿ 4ರವರೆಗೆ ಆಹಾರ ಸಾಮಗ್ರಿಗಳು ಸೇರಿದಂತೆ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕೆಂದರು.

ಕಾರ್ಯಕ್ರಮದ ವ್ಯವಸ್ಥೆಗಾಗಿ ಸಾರಿಗೆ ಸಮಿತಿ, ಕುಡಿಯುವ ನೀರಿನ ಸಮಿತಿ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಸಮಿತಿ, ವಿದ್ಯುತ್ ಹಾಗೂ ದೀಪಾಲಂಕಾರ ಸಮಿತಿ, ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ, ಆಹಾರ ಸಮಿತಿ, ವೈದ್ಯಕೀಯ ಸಮಿತಿ, ಟೆಂಡರ್ ಆಹ್ವಾನ, ಟೆಂಡರ್ ಅಂಗೀಕಾರ ಸಮಿತಿ ರಚಿಸಲಾಗಿದ್ದು, ಎಲ್ಲ ಸಮಿತಿಗಳು ಎರಡು ದಿನದೊಳಗೆ ಸಭೆ ನಡೆಸಿ ವರದಿ ನೀಡಬೇಕು ಎಂದು ನಿರ್ದೇಶಿಸಿದರು.

ಎಡಿಸಿ ಟಿ. ವೆಂಕಟೇಶ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಪಿ.ವಿಶ್ವನಾಥ್, ಎಎಸ್ಪಿ ಕಲಾ ಕೃಷ್ಣಸ್ವಾಮಿ, ಎಂ.ಆರ್. ರಾಜೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: