ಪ್ರಮುಖ ಸುದ್ದಿ

ರೈತ ಸಂಘದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕೆ.ಎಸ್ ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು : ಯೋಗೇಂದ್ರ ಯಾದವ್

ರಾಜ್ಯ(ಮಂಡ್ಯ)ಏ.5:-  ಈ ಬಾರಿ  ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ  ರೈತ ಸಂಘದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರೈತ ನಾಯಕ ದಿ. ಕೆ.ಎಸ್ ಪುಟ್ಟಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಕರೆ ನೀಡಿದರು.

ಮಂಡ್ಯದ ರೈತ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೆ.ಎಸ್ ಪುಟ್ಟಣ್ಣಯ್ಯ ಅವರಿಗೆ ನುಡಿನಮನ ಹಾಗೂ ಪತ್ರಕರ್ತ ರವಿಪಾಂಡವಪುರ ವಿರಚಿತ ರೈತಚೇತನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷ ಯೋಗೇಂದ್ರ ಯಾದವ್ ಭಾಗವಹಿಸಿ ಮಾತನಾಡಿದರು. ರೈತ ಮುಖಂಡ ನಂಜುಂಡಸ್ವಾಮಿ ಅವರಂತೆಯೇ ಕೆ.ಎಸ್ ಪುಟ್ಟಣ್ಣಯ್ಯ ಅವರು ರೈತರ ಪರ ಕಾಳಜಿ ಹೊಂದಿದ್ದರು. ಯಾವೊಬ್ಬ ರೈತನೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರ ಬೆಳೆಗೆ  ಸೂಕ್ತ ಬೆಲೆ ನಿಗದಿಪಡಿಸಬೇಕು ಎಂಬ ಮಹದಾಸೆ ಹೊಂದಿದ್ದರು. ಇದಕ್ಕಾಗಿ ಅವರು ಅವಿರತವಾಗಿ ಶ್ರಮಿಸುತ್ತಿದ್ದರು. ಇದು ಕಾರ್ಯದಲ್ಲಿರುವಾಗಲೇ ಅವರು ಇಹಲೋಕ ತ್ಯೆಜಿಸಿದ್ದು ವಿಷಾದನೀಯ. ಪುಟ್ಟಣ್ಣಯ್ಯ ಅವರ ಈ ಕನಸು ನನಸಾಗಲು ರೈತರಿಗೆ ರಾಜಕೀಯ ಅಧಿಕಾರ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಈ ಬಾರಿ  ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ  ಪುಟ್ಟಣ್ಣಯ್ಯ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಹಾಗೂ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ  ಲಿಂಗೇಗೌಡ ಅವರನ್ನು ಗೆಲ್ಲಿಸುವುದು ಅತ್ಯವಶ್ಯಕ. ಅದ್ದರಿಂದ  ರೈತ ಸಂಘದ ಕಾರ್ಯಕರ್ತರು ಈಗಿನಿಂದಲೇ ಉಳಿದ 40 ದಿನಗಳಲ್ಲಿ ಗ್ರಾಂದ ಪ್ರತಿ ಮನೆಗೂ ತೆರಳಿ ರೈತ ಸಂಘದ ಧ್ಯೇಯೋದ್ದೇಶಗಳನ್ನು ಮನವರಿಕೆ ಮಾಡಿಕೊಡಬೇಕು. ಆಮೂಲಕ ಚುನಾವಣೆಯಲ್ಲಿ ರೈತ ಸಂಘದ ಅಭ್ಯರ್ಥಿಗಳು ಜಯಭೇರಿಯಾಗುವಂತೆ ಮಾಡಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿ ದೇವನೂರು ಮಹದೇವ್ ಮಾತನಾಡಿ,  ಕೆ.ಎಸ್ ಪುಟ್ಟಣ್ಣಯ್ಯ ಅವರಂತೆ ಅವರ ಪುತ್ರ ಸಹ ಯುವನಾಯಕನಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಸಂತೋಷದ ಸಂಗತಿಯೆಂದರೇ ಪುಟ್ಟಣ್ಣಯ್ಯ ಅವರು ಪ್ರತಿನಿಧಿಸುತ್ತಿದ್ದ ಮೇಲುಕೋಟೆ ವಿಧಾನಸಭೆಯಲ್ಲಿ ಜನತೆ ಪಕ್ಷಾತೀತವಾಗಿ  ಈ ಬಾರಿ ದರ್ಶನ್ ಪುಟ್ಟಣ್ಣಯ್ಯಅವರನ್ನ ಬೆಂಬಲಿಸಲು ತೀರ್ಮಾನಿಸಿದ್ದಾರೆ. ಕೆ.ಎಸ್ ಪುಟ್ಟಣ್ಣಯ್ಯ ಅವರ ಋಣ ತೀರಿಸಲು  ಕ್ಷೇತ್ರದಲ ಜನತೆ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಿದರು. ಸಮಾರಂಭದಲ್ಲಿ ಪತ್ರಕರ್ತ ರವಿಪಾಂಡವಪುರ ಅವರು ರೈತ ಚೇತನ ಪುಸ್ತಕ ಬರೆಯಲು ಪ್ರೇರಣೆ ನೀಡಿದ ಘಟನೆ ಬಗ್ಗೆ ಮೆಲುಕು ಹಾಕಿದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಶಶಿಧರ್ ಭಟ್, ಕೆ.ಎಸ್ ಪುಟ್ಟಣ್ಣಯ್ಯ ಪತ್ನಿ ಸುನೀತ ಪುಟ್ಟಣ್ಣಯ್ಯ, ಚಾಮರಸ ಮಾಲಿ ಪಾಟೀಲ್, ಅಮ್ಜದ್ ಪಾಷಾ, ಚುಕ್ಕಿ ನಂಜುಂಡಸ್ವಾಮಿ, ಇತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: