
ಮೈಸೂರು
ದ್ವಿಚಕ್ರವಾಹನಕ್ಕೆ ಗುದ್ದಿದ ಲಾರಿ : ಸವಾರರಿಬ್ಬರಿಗೆ ಗಂಭೀರ ಗಾಯ
ಮೈಸೂರು,ಏ.6:- ಮೈಸೂರು-ಬನ್ನೂರು ರಿಂಗ್ ರಸ್ತೆಯ ಹೊಸ ಹುಂಡಿ ಬಳಿ ದ್ವಿಚಕ್ರವಾಹನಕ್ಕೆ ಲಾರಿ ಗುದ್ದಿದ ಪರಿಣಾಮ ದ್ವಿಚಕ್ರವಾಹನ ಸವಾರರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಈಗಷ್ಟೇ ಸಂಭವಿಸಿದೆ.
ದ್ವಿಚಕ್ರವಾಹನ ಸವಾರರು ಬನ್ನೂರು ಕಡೆಯಿಂದ ಬರುತ್ತಿದ್ದು, ಲಾರಿ ಬನ್ನೂರು ಕಡೆ ತೆರಳುತ್ತಿತ್ತು. ಅತಿವೇಗದಲ್ಲಿ ಬಂದ ಲಾರಿ ದ್ವಿಚಕ್ರವಾಹನ ಸವಾರರಿಗೆ ಗುದ್ದಿದ್ದು, ಗುದ್ದಿದ ರಭಸಕ್ಕೆ ಇಬ್ಬರು ಸವಾರರು 30ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ತಲೆಯಿಂದ ತೀವ್ರ ರಕ್ತಸ್ರಾವವಾಗುತ್ತಿದೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಸಬ್ ಇನ್ಸಪೆಕ್ಟರ್ ಜಯಪ್ರಕಾಶ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಲಾರಿ ಚಾಲಕ ಅಪಘಾತ ನಡೆಸಿ ನಿಲ್ಲದೇ ಪರಾರಿಯಾಗಿದ್ದು, ಚೆಕ್ ಪೋಸ್ಟ್ ಬಳಿ ಲಾರಿ ಚಾಲಕನ್ನು ಬಂಧಿಸಲು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ದ್ವಿಚಕ್ರವಾಹನ ಸವಾರರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. (ಕೆ.ಎಸ್,ಎಸ್.ಎಚ್)