ಪ್ರಮುಖ ಸುದ್ದಿಮೈಸೂರು

ನಾನು ಬರುವವರೆಗೆ ಮೈಸೂರಿನಲ್ಲಿ ಮೂಲಭೂತ ಸೌಕರ್ಯಗಳಿರಲಿಲ್ಲ, ನಾನು ಬಂದ್ಮೇಲೆ ಎಲ್ಲವೂ ಬಂದಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಏ.6:- ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ದೀರ್ಘ ಸಂಬಂಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶ್ರೀರಂಗ ಸಮುದಾಯಭವನದಲ್ಲಿಂದು ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಬೆಂಬಲಿತ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 1978 ರಿಂದಲೂ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿವಿಧ ಪಕ್ಷಗಳಿಂದ ಪ್ರಚಾರ ಮಾಡುತ್ತಿದ್ದೇನೆ. ಮೊದಲಿನಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉತ್ತಮ ಒಡನಾಟ ಇದೆ. ಜಾತಿ ಕಾರಣಕ್ಕಾಗಿ ಚಾಮುಂಡೇಶ್ವರಿ ಜನರ ಜೊತೆ ಒಡನಾಟ ಇಲ್ಲ ,ರಾಜಕಾರಣ  ಜೊತೆ ಜೊತೆಗೆ ಉತ್ತಮ ಬಾಂಧವ್ಯ ಇದೆ. 40 ವರ್ಷಗಳಿಂದ ಚಾಮುಂಡೇಶ್ವರಿ ಕ್ಷೇತ್ರದ ಒಡನಾಟ ಇದೆ. ನಾನು ಅಧಿಕಾರವನ್ನು ಸ್ವಾರ್ಥಕ್ಕಾಗಿ, ಜಾತಿ ರಾಜಕಾರಣ ಮಾಡಲು ಬಳಸಿಕೊಂಡಿಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನನ್ನ ಬಜೆಟ್ ನಲ್ಲಿ ಕೇವಲ ಒಂದು ಜಾತಿಗೆ ಸೀಮಿತವಾಗಿ ಯೋಜನೆ ಕೊಟ್ಟಿಲ್ಲ. ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಜಾತಿ ವಿರೋಧಿ ಅಂತಾರೆ. ನನ್ನ 6 ಬಜೆಟ್ ನೋಡಿ ಕಾಂಗ್ರೆಸ್ ಪಕ್ಷದ ಎಲ್ಲ ಭರವಸೆ ಈಡೇರಿಸಿದ್ದೇನೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ. ಸಭೆಯನ್ನು ಸಂಘಟನೆ ಮಾಡಿದ ಎಲ್ಲರಿಗೂ ಕೃತಜ್ಞತೆ.ನಾನು ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ, ನೀವೆಲ್ಲರೂ ನನ್ನನ್ನು ಗೆಲ್ಲಿಸಲು ಇಲ್ಲಿ ಬಂದಿದ್ದೀರಿ. ಜನತಾಪಕ್ಷ, ಜನತಾದಳ, ಈಗ ಕಾಂಗ್ರೆಸ್ ಎಲ್ಲಾ ಪಕ್ಷದಲ್ಲೂ ಪ್ರಚಾರ ಮಾಡಿದ್ದೇನೆ. ನನ್ನ 40 ವರ್ಷದ ಚುನಾವಣೆಯಲ್ಲಿ ಅನೇಕ ಬಾರಿ ಗೆದ್ದಿದ್ದೇನೆ. ಹಲವು ಬಾರಿ ಸೋತಿದ್ದೇನೆ. ನನ್ನ ಅಧಿಕಾರ ಸ್ವಾರ್ಥಕ್ಕೆ ಬಳಸಲಿಲ್ಲ. ಮಂತ್ರಿಯಾಗಿ 13  ಬಾರಿ ಬಜೆಟ್ ಮಂಡಿಸಿದ್ದೇನೆ. ಬೇರೆಯವರು ಅಪ ಪ್ರಚಾರ ಮಾಡಬಹುದು ಜಾತಿವಾದಿ ಅಂತ. ಅನ್ನ ಭಾಗ್ಯ ಒಂದು ಜಾತಿಗೆ ಮಾತ್ರ ಸೀಮಿತ ಅಲ್ಲ. ಮಕ್ಕಳಿಗೆ ಹಾಲು ಕೊಡುವ ಯೋಜನೆಯಲ್ಲಿ ಎಲ್ಲ ಜಾತಿ ಜನ ಇದ್ದಾರೆ ಅಲ್ವ ಎಂದರು. ಸಾಲ ಮನ್ನಾ ಮಾಡಿದ್ದೇವೆ ಅದು ಒಂದೇ ಜಾತಿ ಅಲ್ವಲ್ಲ. ಅನಿಲ ಭಾಗ್ಯ ಅದು ಎಲ್ಲರಿಗೂ ತಾನೇ?  ಎಲ್ಲಾ ಹೆಣ್ಣು ಮಕ್ಕಳಿಗೂ ಉಚಿತ ವಿದ್ಯಾಭ್ಯಾಸ ಕೊಟ್ಟಿದ್ದೇವೆ. ಹಾಗಾದರೆ ಎಲ್ಲಿ ಸಿದ್ದರಾಮಯ್ಯ ಜಾತಿವಾದಿ?  ನಾನು ಜಾತಿವಾದಿಯಾಗಿದ್ದರೆ ಐದು  ವರ್ಷ ಅಧಿಕಾರ ಮಾಡುತ್ತಿರಲಿಲ್ಲ. ಸಿದ್ದರಾಮಯ್ಯ ದುರಹಂಕಾರಿ ಅಂತಾರೆ, ಮಾತು ಮಾತ್ರ ಒರಟು. ನಾನು ಯಾರನ್ನೂ ದ್ವೇಷ ಮಾಡಲ್ಲ. ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿ ಅಂತಾ ಒತ್ತಾಯ ಇದೆ. ನಾನು ಖಂಡಿತವಾಗಿ ಎಲ್ಲೂ ಹೋಗಲ್ಲ. ಸಿದ್ದರಾಮಯ್ಯ ಹೆದರಿಕೊಂಡಿದ್ದಾರೆ ಅಂತಾರೆ . ನಾನೂ ಬೇರೆಲ್ಲೂ ಸ್ಪರ್ಧೆ ಮಾಡಲ್ಲ, ಚಾಮುಂಡೇಶ್ವರಿಯಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದು ಮೂರು ಬಾರಿ ಪುನರುಚ್ಛರಿಸಿದರು.

ಮಾಜಿ ಶಾಸಕ ಸತ್ಯನಾರಾಣಗೌಡ ಮಾತನಾಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಒಕ್ಕಲಿಗರ ಬೆಂಬಲ ಇಲ್ಲ ಅಂತ ಅಪಪ್ರಚಾರ ಆಗ್ತಿದೆ. ಕೆಲವರು ಬೇಕೆಂದು ಪತ್ರಿಕೆ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಜತೆ ನಾವಿದ್ದೇವೆ ಎಂದು ತೋರಿಸಲು ನಾವು ಸಭೆ ಸೇರಿದ್ದೇವೆ. ಸದ್ಯ ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕ ಜಿಟಿದೇವೇಗೌಡ ಕೇವಲ ತಮ್ಮ, ಹಾಗೂ ಮಗನ ಹುಟ್ಟಿದ ಹಬ್ಬ ಆಚರಿಸಿಕೊಂಡರು. ಅದು ಬಿಟ್ಟರೆ ಯಾವುದೇ ರೀತಿಯ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಸುಮಾರು ಒಂದು ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಮಾಜಿ ದಿ ದೇವರಾಜು ಅರಸು ಅವರ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿಗಾಗಿ ಶ್ರಮಿಸಿದ್ದಾರೆ. ಸಿಎಂಗೆ ಮತ ಹಾಕುತ್ತಿದ್ದೇವೆ ಅನ್ನೋ ಸಂತೋಷ ನಮಗೆಲ್ಲರಿಗೂ ಇರಲಿ ಎಂದರು.

ನಾನು ಬರುವವರೆಗೆ ಮೈಸೂರಿನಲ್ಲಿ ಮೂಲಭೂತ ಸೌಕರ್ಯಗಳಿರಲಿಲ್ಲ.  ನಾನು ಬಂದ್ಮೇಲೆ ಎಲ್ಲವೂ ಬಂದಿದೆ. ಹಾಗಾಗಿ ಇಲ್ಲಿನ‌ ಜನ ನನ್ನ ಕೈಹಿಡಿಯುತ್ತಾರೆ. ಜೆಡಿಎಸ್ ಜತೆ ಹೆಚ್ ವಿಶ್ವನಾಥ್ , ಬಿಜೆಪಿಗೆ ಶ್ರೀನಿವಾಸ್ ಪ್ರಸಾದ್ ಸೇರ್ಕೊಂಡಿದ್ದಾರೆ. ಅವರೆಲ್ಲರು ಸೇರಿಯಾಯ್ತು, ಸೋತೂ ಆಯ್ತು. ನಾನು ಯಾರನ್ನೂ ನಂಬಿ ರಾಜಕೀಯ ಮಾಡ್ತಿಲ್ಲ. ನಾನು ಜನರನ್ನು ನಂಬಿಕೊಂಡು ರಾಜಕೀಯ ಮಾಡ್ತಿದ್ದೇನೆ. ಹಾಗಾಗಿ ಅವರಿಗೆ ತಲೆ ಬಾಗುತ್ತೇನೆ. ಆದರೆ ಯಾರೋ ಬೆದರಿಸಿದರೆ, ಹೆದರಿಸಿದರೆ ನಾನು ಹೆದರುವವನಲ್ಲ. ಪ್ರಜಾಪ್ರಭುತ್ವದಲ್ಲಿ ಜನರೆ ಮಾಲೀಕರು ನೀವು ಯಾರನ್ನ ಬೇಕೋ ಅವರನ್ನೇ ಆಯ್ಕೆ ಮಾಡ್ತೀರಿ. ನಿಮ್ಮ ಮೇಲೆ ನನಗೆ ನಂಬಿಕೆಯಿದೆ. ಪ್ರಚಾರಕ್ಕೆ ಯಾರೇ ಬರಲಿ ಯಾರೇ ಹೋಗಲಿ ಮತ ಕೇಳಲು ಬರಬಹುದು ಆದರೆ ತೀರ್ಮಾನ ಮಾಡೋರು ನೀವು, ಮತ್ತೋಮ್ಮೆ ಹೇಳ್ತಿನಿ ನಿಮಗೆ ನಾನು ತಲೆ  ಬಾಗುತ್ತೇನೆ. ನನಗೆ ನಿಮ್ಮ ಆಶೀರ್ವಾದ ಇರಲಿ ಎಂದರು.

ಸಭೆಯಲ್ಲಿ ಮಾವಿನಹಳ್ಳಿ ಸಿದ್ದೇಗೌಡ ಸೇರಿದಂತೆ ಹಲವು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: