ಕರ್ನಾಟಕ

ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್ ಅಸ್ತಿತ್ವಕ್ಕೆ : ಮಹಿಳೆಯರಿಗೆ ಫುಟ್ಬಾಲ್ ತರಬೇತಿ ನೀಡಲು ನಿರ್ಧಾರ

ರಾಜ್ಯ(ಮಡಿಕೇರಿ )ಏ.6 : – ಕೊಡಗು ಜಿಲ್ಲೆಯ ಮಹಿಳೆಯರಲ್ಲಿ ಫುಟ್ಬಾಲ್ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ  ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್‍ನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಆಸಕ್ತ ಫುಟ್ಬಾಲ್ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಫುಟ್ಬಾಲ್ ತರಬೇತುದಾರ ಎಂ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗು ಜಿಲ್ಲೆ ಕ್ರೀಡೆಯ ತವರು ಎಂದು ಪರಿಗಣಿಸಲ್ಪಟ್ಟಿದ್ದು, ಇಲ್ಲಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ ಮಹಿಳಾ ಫುಟ್ಬಾಲ್ ಕ್ರೀಡೆಯಲ್ಲಿ ಜಿಲ್ಲೆಯ ಪ್ರತಿಭೆಗಳು ಸಾಕಷ್ಟು ಹಿಂದುಳಿದಿದ್ದು, ಮಹಿಳಾ ಆಟಗಾರ್ತಿಯರಿಗೆ ಅವಕಾಶಗಳು ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ‘ವುಮೆನ್ಸ್ ಸಾಕರ್ ಕ್ಲಬ್’ನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರನ್ನು ಹೊರತುಪಡಿಸಿದರೆ ಇದು ಮೂರನೇ ಕ್ಲಬ್ ಆಗಿದ್ದು, ಈ ವರ್ಷದ ಆರಂಭದಲ್ಲಿ ಕ್ಲಬ್‍ನ್ನು ಅಸ್ತಿತ್ವಕ್ಕೆ ತರಲಾಗಿದೆ. ಈಗಾಗಲೇ 20ಕ್ಕೂ ಅಧಿಕ ಆಟಗಾರ್ತಿಯರು ಕ್ಲಬ್‍ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕ್ಲಬ್‍ನಲ್ಲಿ ಸದಸ್ಯತ್ವ ಪಡೆದವರಿಗೆ ವೃತ್ತಿಪರ ತರಬೇತುದಾರರಿಂದ ಸಂಪೂರ್ಣವಾಗಿ ಉಚಿತವಾಗಿ ತರಬೇತಿ ನೀಡಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. ಪ್ರಸಕ್ತ ಆಟಗಾರರಿಗೆ ಮಡಿಕೇರಿಯಲ್ಲಿ ಪ್ರತೀ ಭಾನುವಾರ ಉಚಿತವಾಗಿ ತರಬೇತು ನೀಡಲು ಚಿಂತನೆ ನಡೆಸಲಾಗಿದ್ದು, ಆ ಮೂಲಕ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕ್ಲಬ್‍ನ ಮೂಲಕ ಮಹಿಳೆಯರಿಗಾಗಿಯೇ ಪಂದ್ಯಾವಳಿಯೊಂದನ್ನು ಆಯೋಜಿಸುವ ಗುರಿ ಹೊಂದಲಾಗಿತ್ತು. ಆದರೆ ಇದಕ್ಕೆ ಸುಮಾರು 10 ಮಹಿಳಾ ತಂಡಗಳಾದರೂ ಬೇಕಿದೆ. ಆದರೆ ಜಿಲ್ಲೆಯಲ್ಲಿ ಅಷ್ಟೊಂದು ತಂಡಗಳು ಇಲ್ಲದಿರುವುದರಿಂದ ಪ್ರಸಕ್ತ 40 ವರ್ಷ ಮೇಲ್ಪಟ್ಟ ಪುರುಷರ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಆ ಮೂಲಕ  ಕೊಡಗಿನ ಹಳೆಯ ಫುಟ್ಬಾಲ್ ಕಲಿಗಳನ್ನು ಒಂದೆಡೆ ಸೇರಿಸಿ ಆಡಿಸುವುದರೊಂದಿಗೆ ಮಹಿಳಾ ಫುಟ್ಬಾಲ್ ಕ್ರೀಡೆಯನ್ನು ಜನಪ್ರಿಯಗೊಳಿಸಲು ಯೋಜನೆ ರೂಪಿಸಿರುವುದಾಗಿ ಇಬ್ರಾಹಿಂ ಹೇಳಿದರು.

ಕ್ಲಬ್‍ನ ವ್ಯವಸ್ಥಾಪಕಿ ಬಡುವಂಡ್ರ ಕವಿತಾ ಬೆಳ್ಯಪ್ಪ ಮಾತನಾಡಿ, ಏ.9 ಮತ್ತು 10ರಂದು ಮರಗೋಡು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 40 ವರ್ಷ ಮೇಲ್ಪಟ್ಟ ಪುರುಷರ ಫುಟ್ಬಾಲ್ ಪಂದ್ಯಾವಳಿಯನ್ನು ಕೊಡಗು ಫುಟ್‍ಬಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು.  ಸುಮಾರು 15 ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, 7ಮಂದಿ ಆಟಗಾರರ ಪಂದ್ಯ ಇದಾಗಿದೆ. ಪಾಲ್ಗೊಳ್ಳುವ ತಂಡಗಳಿಗೆ 2ಸಾವಿರ ರೂ.ಗಳ ಮೈದಾನ ಶುಲ್ಕ ನಿಗಧಿಪಡಿಸಲಾಗಿದೆ.  ನಾಕೌಟ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಜಯಗಳಿಸುವ ತಂಡಕ್ಕೆ 22222ರೂ. ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 11111ರೂ. ನಗದು ಮತತು ಆಕರ್ಷಕ ಟ್ರೋಫಿ ನೀಡಲಾಗುವುದಲ್ಲದೆ, ಸರಣಿಯ ಅತ್ಯುತ್ತಮ ಆಟಗಾರ, ಅತ್ಯುತ್ತಮ ಗೋಲುಕೀಪರ್, ಅತ್ಯಧಿಕ ಸ್ಕೋರರ್ ಮತ್ತು ಅತ್ಯುತ್ತಮ ತಂಡ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ. ಪಂದ್ಯಾವಳಿಗೆ ಜಿಲ್ಲೆಯ ಹಿರಿಯ ಕ್ರೀಡಾ ಸಾಧಕರನ್ನು ಅತಿಥಿಗಳನ್ನಾಗಿ ಆಹ್ವಾನಿಸಿ ಅವರ ಮೂಲಕ ಮಹಿಳಾ ಫುಟ್ಬಾಲ್ ಉತ್ತೇಜನಕ್ಕೆ ನೆರವು ಪಡೆಯುವ ಉದ್ದೇಶವಿದೆ ಎಂದು ಕವಿತಾ ಬೆಳ್ಯಪ್ಪ ಹೇಳಿದರು.

ಅಲ್ಲದೆ ಪಂದ್ಯಾವಳಿಯ ಸಮಾರೋಪದಂದು ಜಿಲ್ಲೆಯ ಎರಡು ಮಹಿಳಾ ಫುಟ್ಬಾಲ್ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಏರ್ಪಡಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಅವಧಿಯಲ್ಲಿ ಅಂಡರ್ 14, ಅಂಡರ್ 18, ಅಂಡರ್ 22 ಹಾಗೂ ಮಹಿಳೆಯರಿಗೆ  ಫುಟ್ಬಾಲ್ ತರಬೇತಿ ಶಿಬಿರ ಏರ್ಪಡಿಸುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದರು.

ಈ ಕುರಿತು ಹೆಚ್ಚಿನ ಮಾಹಿಗಾಗಿ ಇಬ್ರಾಹಿಂ(8618303623), ಪಾಣತ್ತಲೆ ಜಗದೀಶ್ ಮಂದಪ್ಪ (9448976421) ಅಥವಾ ದರ್ಶನ್ ಸುಕುಮಾರ್ (7760213813)ನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ  ಕ್ಲಬ್‍ನ ಕಾರ್ಯದರ್ಶಿ ಬಿ.ಚೇತನಾ ವಿನಯ್, ಸದಸ್ಯೆ ಆರ್.ಗೀತಾ, ಜಗದೀಶ್ ಮಂದಪ್ಪ ಹಾಗೂ ದರ್ಶನ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: