ಮೈಸೂರು

ಅಲ್ಪಸಂಖ್ಯಾತರ ಹಕ್ಕುಗಳಿಗೆ ಒತ್ತಾಯ: ಎಸ್.ಡಿ.ಪಿ.ಐ ಪ್ರತಿಭಟನೆ

ಅಲ್ಪಸಂಖ್ಯಾತರ ಹಕ್ಕುಗಳಿಗೆ ಒತ್ತಾಯಿಸಿ ರಾಜ್ಯವ್ಯಾಪಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಮೈಸೂರಿನಲ್ಲಿಯೂ ಬುಧವಾರ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಬಡವರ ಬದುಕನ್ನು ಬೀದಿಪಾಲು ಮಾಡಿ ಉಳ್ಳವರ ಸ್ಥಿತಿ ಸುಧಾರಿಸುವುದು ಅಭಿವೃದ್ಧಿಯಲ್ಲ, ಅಭಿವೃದ್ಧಿ ಯೋಜನೆಗಳು ಕೇವಲ ಶೋಷಣೆಗಾಗಿ ಅಲ್ಲ, ಜೀವನ ಮಟ್ಟದ ಸುಧಾರಣೆಗಾಗಿ ಎನ್ನುವ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡಿರುವುದು ಕಂಡು ಬಂತು.

ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ನವೆಂಬರ್ ನಲ್ಲಿ ಕರ್ನಾಟಕ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಂಡಿದ್ದೇವೆ. ಅಭಿಯಾನದ ಅಂಗವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ ಎಂದರು. ರಾಜ್ಯ ಸರ್ಕಾರವು 2017-18ರ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 10ಸಾವಿರ ಕೋಟಿ ರೂ.ಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಚಿಸಿದ ರಂಗನಾಥ ಮಿಶ್ರಾ ಆಯೋಗದ ಶಿಫಾರಸ್ಸುಗಳನ್ನು ರಾಜ್ಯದಲ್ಲಿ ಕೂಡಲೇ ಜಾರಿಗೊಳಿಸಬೇಕು. ಅಲ್ಪಸಂಖ್ಯಾತ ಸಮುದಾಯಗಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳನ್ನು ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಆರಂಭಿಸಬೇಕು. ಖಾಸಗಿ ವಲಯದಲ್ಲೂ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಜಾರಿಗೊಳಿಸಬೇಕು. ಅಲ್ಪಸಂಖ್ಯಾತ ಮಹಿಳಾ ಉದ್ಯೋಗಿಗಳಿಗೆ ಪ್ರತಿ ಜಿಲ್ಲೆಗಳಲ್ಲೂ ಹಾಸ್ಟೆಲ್ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ಮೈಸೂರು ಜಿಲ್ಲಾ ಕಾರ್ಯದರ್ಶಿ ತಬ್ರೇಜ್ ಶೇಟ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

comments

Related Articles

error: