ಕರ್ನಾಟಕಪ್ರಮುಖ ಸುದ್ದಿ

ಬೇಸಿಗೆ ಬಿಸಿಲ ಝಳ: ರಾಜ್ಯದ 8 ಜಿಲ್ಲೆಗಳ ಸರಕಾರಿ ಕಚೇರಿ ಸಮಯ ಬದಲಿಸಿ ಆದೇಶ

ಕಲಬುರಗಿ (ಏ.7): ಬೇಸಿಗೆ ಆರಂಭದಲ್ಲೇ ರಾಜ್ಯದ ಜನ ಬಿಸಿಲ ಝಳಕ್ಕೆ ಬೆವರಿ ಬಳಲುತ್ತಿದ್ದಾರೆ. ಇನ್ನು ಬಿಸಿಲ ನಾಡು ಕಲಬುರಗಿ ವಿಭಾಗದಲ್ಲಿ ಮತ್ತು ಬೆಳಗಾವಿ ವಿಭಾಗದ 2 ಜಿಲ್ಲೆಗಳಲ್ಲಿ ಬಿಸಿಲ ಹೊಡೆತ ತಪ್ಪಿಸುವ ಸಲುವಾಗಿ ಸರ್ಕಾರಿ ಕಚೇರಿಗಳ ಸಮಯವನ್ನೇ ಬದಲಿಸಿ ಆದೇಶ ಹೊರಡಿಸಲಾಗಿದೆ.

ಏಪ್ರಿಲ್ 6 ರಿಂದ ಮೇ 31ರ ವರೆಗೆ ಮಾತ್ರ ಈ ಆದೇಶ ಅನ್ವಯವಾಗಲಿದ್ದು, ಈ ಅವಧಿಯಲ್ಲಿ ಸರಕಾರಿ ಕಚೇರಿಗಳು ಬೆ.8 ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ಕರ್ತವ್ಯ ನಿರ್ವಹಿಸುತ್ತವೆ. ಈ ಬಗ್ಗೆ ಸರಕಾರದ ಅಧೀನ ಕಾರ್ಯದರ್ಶಿ (ಸಿಬ್ಬಂದಿ ಆಡಳಿತ ಸುಧಾರಣೆ) ಸುಜಾತ ಎಚ್.ಎಸ್. ಆದೇಶ ಹೊರಡಿಸಿದ್ದಾರೆ.

ಕಲಬುರಗಿ ವಿಭಾಗದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ ಹಾಗೂ ಬಳ್ಳಾರಿ ಮತ್ತು ಬೆಳಗಾವಿ ವಿಭಾಗದ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಸರಕಾರಿ ಕಚೇರಿಗಳ ಕೆಲಸದ ಸಮಯದಲ್ಲಿ ಈ ಬದಲಾವಣೆ ಅನ್ವಯ ಆಗುತ್ತದೆ. ಇನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಈ ಸಮಯ ಬದಲಾವಣೆಯಿಂದ ಆಡಳಿತಕ್ಕೆ ತೊಂದರೆ ಆಗದಂತೆ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಸರಕಾರಿ ಕಚೇರಿ ವೇಳೆ ಬದಲಾವಣೆ ಆಗಿರುವುದರಿಂದ ಸರಕಾರಿ ಕಚೇರಿಗಳಿಗೆ ತೆರಳುವವರು ಸಮಯದಲ್ಲಿನ ಬದಲಾವಣೆ ಗಮನಿಸಿಕೊಂಡು ತೆರಳಿದರೆ ಅನಗತ್ಯ ಸಮಯ ಅಪವ್ಯಯವಾಗುವುದನ್ನು ತಪ್ಪಿಸಬಹುದಾಗಿದೆ.(ಎನ್.ಬಿ)

Leave a Reply

comments

Related Articles

error: