ಮೈಸೂರು

ಮೈಸೂರು ವಿವಿ ಹಗರಣ: ಸಿಬಿಐ ತನಿಖೆಗೆ ಒತ್ತಾಯ

ಶತಮಾನೋತ್ಸವ ಆಚರಿಸುತ್ತಿರುವ ಮೈಸೂರು  ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಹಲವಾರು ಹಗರಣಗಳು ನಡೆದಿದ್ದರೂ ಸಂಸದ ಪ್ರತಾಪ್ ಸಿಂಹ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಒತ್ತಾಯಿಸುವ ಬದಲು ಕುಲಪತಿಗಳ ರಕ್ಷಣೆಗೆ ನಿಂತಿರುವುದು ಖಂಡನೀಯವೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಖೇಧ ವ್ಯಕ್ತಪಡಿಸಿದರು.

ಅವರು ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಪಾಲರ ಕಚೇರಿಯೇ ಭ್ರಷ್ಟಾಚಾರವೆಸಗುತ್ತಿದೆ. ಹಗರಣಗಳ ಮಹಾಪೂರವೇ ಮೈಸೂರು ವಿವಿಯಲ್ಲಿ ನಡೆದಿದ್ದರೂ ರಾಜ್ಯಪಾಲ ವಜುಭಾಯಿ ವಾಲ ಕ್ರಮ ಕೈಗೊಳ್ಳದೇ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡುತ್ತಿದೆ. ಮೈಸೂರು ವಿವಿಯಲ್ಲಿ 14 ಪ್ರಮುಖ ಆರೋಪಗಳು ನಡೆದಿದ್ದು ಕೇವಲ 2ಕ್ಕೆ ಮಾತ್ರ ಎಫ್.ಐ.ಆರ್. ದಾಖಲಾಗಿದೆ. ಇದಕ್ಕೆ ಸಂಸದರ ಪರೋಕ್ಷ ಕುಮ್ಮಕ್ಕೆ ಕಾರಣ. ಪ್ರಬಲರನ್ನು ಬಿಟ್ಟು ಹಿಂದುಳಿದ ವರ್ಗದವರ ಮೇಲೆ ಗಧಾಪ್ರಹಾರ ನಡೆಸಿ ವಜಾಗೊಳಿಸಿದ್ದು ಪ್ರಕರಣದ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ. ಹಗರಣದ ಬಗ್ಗೆ ಸಿಬಿಐಯಿಂದ ಕೂಲಂಕುಷ ತನಿಖೆಯಾಗಲಿ ಎಂದು ಒತ್ತಾಯಿಸಿದರು

ಮಂಗನ ಕೈಯಲ್ಲಿ ಮಾಣಿಕ್ಯ: ಐತಿಹಾಸಿಕ ಪ್ರಸಿದ್ಧ ನಗರ ಮೈಸೂರಿಗೆ ತನ್ನದೇ ಆದ ಘನತೆ, ಮೆರುಗಿದ್ದು ವಿಶ್ವವನ್ನೇ ಸೆಳೆಯುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿದೆ. ಸಂಸದ ಪ್ರತಾಪ್ ಸಿಂಹ ಕ್ಷೇತ್ರದ ಘನತೆಯನ್ನು ಎತ್ತಿಹಿಡಿಯುವ ಬದಲು ಹಿರಿಯ ರಾಜಕಾರಣಿ ಎಸ್.ವಿಶ್ವನಾಥ್ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ಸ್ಥಾನಕ್ಕೆ ಅವಮಾನವೆಸುಗುತ್ತಿದ್ದು ಮಂಗನಿಗೇನು ಗೊತ್ತು ಮಾಣಿಕ್ಯದ ಬೆಲೆ ಎಂದು ಲೇವಡಿ ಮಾಡಿದರು. ಹಿರಿಯ ರಾಜಕಾರಣಿಗಳ ಬಗ್ಗೆ ಮಾತನಾಡುವಾಗ ನಿಗಾ ವಹಿಸಿ. ನಿಮ್ಮ ಧೋರಣೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕ್ಷೇತ್ರಕ್ಕೆ ನಿಮ್ಮ ಕೊಡುಗೆಯೇನು..?: ಸಂಸದ ಪ್ರತಾಪ್ ಸಿಂಹ ದಲಿತ ಕೇರಿಗಳಿಗೆ ಇಂದಿಗೂ ಭೇಟಿ ನೀಡಿಲ್ಲ. ಜನರ ಹಿತ ಕಾಪಾಡಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ಕೇಂದ್ರ ಉಸ್ತುವಾರಿ ಸಮಿತಿಗೆ ಸದಸ್ಯರನ್ನೇ ನೇಮಿಸದೇ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿ ಮಾಧ್ಯಮಗಳಲ್ಲಿ ಬಾಲಿಶ ಹೇಳಿಕೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಸಂಸದರು ತಮ್ಮ ಲೇಖನಗಳಲ್ಲಿ ಹಾಗೂ ವ್ಯಕ್ತಿಗತವಾಗಿ ಹಿಂದುಳಿದವರ ಮೇಲೆ ಪರೋಕ್ಷ ಚಾಟಿ ಬೀಸಿ ದಮನಿಸುತ್ತಿದ್ದಾರೆ. ಮಾಜಿ ಸಂಸದ ವಿಶ್ವನಾಥ ಸಂಸದರಾಗಿದ್ದ ವೇಳೆ ಬಿಸಿಯೂಟ, ರೈತರಿಗೆ ಯಶಸ್ವಿನಿ ಎನ್ನುವ ಯೋಜನೆಗಳನ್ನು ತಂದರು. ನಿಮ್ಮ ಸಾಧನೆ ಶೂನ್ಯವಾಗಿದೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ವಿಶ್ವಕರ್ಮ ಮಹಾಮಂಡಲ ಜಿಲ್ಲಾಧ್ಯಕ್ಷ ಸಿ.ಟಿ.ಆಚಾರ್ಯ, ದಲಿತ ಸಂಘಟನೆಗಳ ಒಕ್ಕೂಟ ಪಿ.ರಾಜು, ರಾಜ್ಯಭೋವಿ ಹಿತರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ರಾಜಣ್ಣ, ಜಿಲ್ಲಾ ಸವಿತಾ ಸಂಘರ್ಷ ಸಮಿತಿ ಅಧ್ಯಕ್ಷ ವಿ.ಮಂಜುನಾಥ್ ಹಾಗೂ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಅಭಿಷೇಕ್ ಶಿವಣ್ಣ ಉಪಸ್ಥಿತರಿದ್ದರು.

Leave a Reply

comments

Related Articles

error: