
ಮುಂಬೈ (ಏ.9): ಇಷ್ಟು ದಿನ ಕರ್ನಾಟಕದಲ್ಲಿ ನಡೆಯುತ್ತಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಇದೀಗ ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. ಪ್ರತ್ಯೇಕ ಧರ್ಮ ಘೋಷಿಸಬೇಕು ಹಾಗೂ ರಾಷ್ಟ್ರಮಟ್ಟದಲ್ಲಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಗೆ ಮಹಾರಾಷ್ಟದಲ್ಲೂ ಜೀವಬಂದಿದ್ದು, ಔರಂಗಾಬಾದ್ನಲ್ಲಿ ಲಿಂಗಾಯತ ಸಮುದಾಯ ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದೆ.
ಕರ್ನಾಟಕದ ಗಡಿಗೆ ಹೊಂದಿಕೊಂಡಂತಿರುವ ಮಹಾರಾಷ್ಟ್ರದ ಭಾಗಗಳಲ್ಲಿ ಸಾಕಷ್ಟು ಲಿಂಗಾಯತ ಜನಸಂಖ್ಯೆ ಇದೆ. ಕರ್ನಾಟಕ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮ ಹಾಗೂ ಅಲ್ಪಸಂಖ್ಯಾತ ಸಮುದಾಯವೆಂದು ಮಾನ್ಯತೆ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತಿರುವುದರಿಂದ ಜನರು ಮಹಾರಾಷ್ಟ್ರದಲ್ಲೂ ಹೋರಾಟ ಆರಂಭಿಸಿದ್ದಾರೆ.
ಭಾನುವಾರ ನಡೆದ ಲಿಂಗಾಯತ ರ್ಯಾಲಿಯಲ್ಲಿ ಮರಾಠಾ ಸಮುದಾಯದ ಮುಖಂಡರು ಕೂಡ ಪಾಲ್ಗೊಂಡು ಬೆಂಬಲ ಘೋಷಿಸಿದ್ದು ವಿಶೇಷವಾಗಿತ್ತು. ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರ ಮಾರ್ಗದರ್ಶನದಲ್ಲಿ ನಡೆದ ಮೆರವಣಿಗೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡರು. ಈ ವೇಳೆ ಲಿಂಗಾಯತ ಸ್ವತಂತ್ರ ಧರ್ಮದ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಲಾಯಿತು ಎಂದು ವರದಿಯಾಗಿದೆ.(ಎನ್.ಬಿ)