ಕರ್ನಾಟಕಪ್ರಮುಖ ಸುದ್ದಿ

ಮಂಡ್ಯದ ನಿಸರ್ಗಪ್ರೇಮಿ ಕಾಮೇಗೌಡರಿಗೆ ಬಸವಶ್ರೀ ಪ್ರಶಸ್ತಿ: ಮುರುಘಾ ಶರಣರಿಂದ ಘೋಷಣೆ

ಚಿತ್ರದುರ್ಗ (ಏ.9): ಮುರುಘಾಮಠದಿಂದ ಪ್ರತಿವರ್ಷ ನೀಡಲಾಗುವ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಆಯ್ಕೆಯಾಗಿದ್ದಾರೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ. ಇದರಿಂದ ಅಜ್ಞಾತ, ಅಕ್ಷರ ವಂಚಿತ, ಬಡತನ ರೇಖೆಯ ಕೆಳ ಅಂಚಿನಲ್ಲಿ ಜೀವನ ಸಾಗಿಸುವ ಸಣ್ಣರೈತ, ಕುರಿಗಾಹಿ, ನಿಸರ್ಗಪ್ರೇಮಿ ಅವರ ಸೇವೆಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಠದಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿ, ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ತತ್ತ್ವಚಿಂತನೆ, ಸಾಮಾಜಿಕ ಆಂದೋಲನ ಮತ್ತು ವಚನ ಸಾಹಿತ್ಯವನ್ನು ಕುರಿತು ವಿಶೇಷ ಅಧ್ಯಯನದಲ್ಲಿ ತೊಡಗಿ ಗ್ರಂಥ ರಚಿಸುವ ವಿದ್ವಾಂಸರಿಗೆ ಹಾಗೂ ಶರಣರ ಆದರ್ಶಗಳನ್ನಾಧರಿಸಿ ಋಜುಮಾರ್ಗದಲ್ಲಿ ನಡೆಯುವ ಮಹನೀಯರಿಗೆ ಪ್ರದಾನ ಮಾಡುವ ಸಲುವಾಗಿ ಶ್ರೀ ಮುರುಘಾಮಠ ಸ್ಥಾಪಿಸಿರುವ ಪ್ರಶಸ್ತಿ ಇದಾಗಿದ್ದು, ಐದು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ವಾಸಿಗಳಾದ ನೀಲಿ ವೆಂಕಟೆಗೌಡ ಮತ್ತು ರಾಜಮ್ಮ ದಂಪತಿಯ 10ನೇ ಪುತ್ರರಾಗಿರುವ ಕಾಮೇಗೌಡರು ‘ಶಾಲೆ’ಯ ಹೊಸ್ತಿಲು ತುಳಿದವರಲ್ಲ. ಚಿಕ್ಕದೊಂದು ಮಣ್ಣಿನ ಮನೆ, ಒಂದು ದಿನದ ಬಿತ್ತನೆಯಷ್ಟು ಭೂಮಿ ಮತ್ತು ಒಂದಷ್ಟು ಕುರಿಮಂದೆಯೇ ಇವರ ಆಸ್ತಿ. ಕುಂದೂರು ಬೆಟ್ಟದ ಪೂರ್ವದಂಚಿನ ತಳ ತುದಿಯಲ್ಲಿ ಹಕ್ಕಿ, ಪಕ್ಷಿ, ಜನ, ಜಾನುವಾರುಗಳ ಬದುಕಿನ ಉಳಿವಿಗಾಗಿ ಅವರು ಮಾಡಿರುವ ಜಲಾನಯನ ಅಭಿವೃದ್ಧಿ ಕಾರ್ಯ ಅನುಪಮ.

ಸರ್ಕಾರಿ ಇಲಾಖೆ ಮತ್ತು ಸರ್ಕಾರೇತರ ಸಂಸ್ಥೆಗಳು ಒಗ್ಗೂಡಿ ನಡೆಸುತ್ತಿರುವ ಜಲಾನಯನ ಅಭಿವೃದ್ಧಿ ಕಾರ್ಯಗಳಲ್ಲಿ ಕಾಣಲು ಸಾಧ್ಯವಾಗದಷ್ಟರ ಮಟ್ಟಿಗಿನ ಬದ್ಧತೆ ಮತ್ತು ಜೀವ ಪ್ರೇಮ ಮೆರೆದ ಕಾಯಕ ಇವರದು. ಬೆಟ್ಟದ ಬುಡದಲ್ಲಿ ಹನ್ನೆರಡಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ನಿರ್ಮಿಸಿ, ಮಳೆನೀರು ಸಂಗ್ರಹಿಸಿ, ಬಿಸಿಲಿನ ಬೇಗೆಯಿಂದ ತತ್ತರಿಸುವ ಜೀವರಾಶಿಗಳಿಗೆ ಮರುಜೀವ ನೀಡುತ್ತಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ಇವರು ಮಾಡಿರುವ ಕಾಯಕ ಹನ್ನೆರಡನೆ ಶತಮಾನದ ಬಸವಾದಿ ಶರಣರ ಕಾಯಕಕ್ಕೆ ಸರಿಸಮಾನವಾದುದೆಂದರೆ ಅತಿಶಯೋಕ್ತಿಯಲ್ಲ ಎಂದು ಸ್ವಾಮೀಜಿ ನುಡಿದರು.

ಈ ಅಜ್ಞಾತ ಸಾಧಕನನ್ನು ಗುರುತಿಸಿ ಗೌರವಿಸಿರುವ ಪ್ರಮುಖ ಸಂಸ್ಥೆಗಳಲ್ಲಿ ಮೈಸೂರಿನ ರಂಗಾಯಣ ಮತ್ತು ಮಂಡ್ಯದ ಶಂಕರೇಗೌಡ ಪ್ರತಿಷ್ಠಾನಗಳು ಮೊದಲಿನವುಗಳಾಗಿವೆ. ಅವರು ನೀಡಿದ ಬಹುಮಾನದ ಬಿಡಿಗಾಸನ್ನು ಮನೆಗೂ ಕೊಡದೆ, ಜೆಸಿಬಿ, ಇಟಾಚಿಗಳಿಂದ ಮತ್ತಷ್ಟು ಚೆಕ್‌ಡ್ಯಾಂಗಳನ್ನು ನಿರ್ಮಿಸುತ್ತಿದ್ದಾರೆ. ಇವರ ಈ ಸಾಧನೆಯನ್ನು ಮೆಚ್ಚಿ ಶ್ರೀ ಮುರುಘಾಮಠ ತನ್ನ ಪ್ರತಿಷ್ಠಿತ 2017ನೇ ಸಾಲಿನ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈಗಾಗಲೇ ಜಾಗತಿಕ ವ್ಯಾಪ್ತಿಗೆ ತಲುಪಿರುವ ಈ ಪ್ರಶಸ್ತಿಯನ್ನು ಇದೀಗ ಕಾಮೇಗೌಡರಿಗೆ ನೀಡುವ ಮೂಲಕ ಸೇವಾ ಮೌಲ್ಯವನ್ನು ಜಾಗತೀಕರಿಸಿದ ತೃಪ್ತಿ ಶ್ರೀಮಠ ಮತ್ತು ಶ್ರೀಮಠದ ಅಭಿಮಾನಿಗಳದ್ದಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಈ.ಚಿತ್ರಶೇಖರ್, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕೆ.ವಿ. ಪ್ರಭಾಕರ್, ಕೆ.ಎಂ.ವೀರೇಶ್, ಮಲ್ಲಿಕಾರ್ಜುನಯ್ಯ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಪಟೇಲ್ ಶಿವಕುಮಾರ್, ಗಾಯತ್ರಿ ಶಿವರಾಂ, ರುದ್ರಾಣಿ ಗಂಗಾಧರ್, ಪತ್ರಕರ್ತ ಎ.ವಿಜಯಕುಮಾರ್, ನಿರಂಜನಮೂರ್ತಿ, ಹನುಮಂತಪ್ಪ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: