ಮೈಸೂರು

ಕೊಡವ ಪ್ರತ್ಯೇಕ ಧರ್ಮ ಬೇಕಿಲ್ಲ : ಎಸ್.ಯು.ನಾಚಪ್ಪ ಸ್ಪಷ್ಟನೆ

ಮೈಸೂರು, ಏ.9: ಕೊಡವ ಬುಡಕಟ್ಟು ಜನಾಂಗಕ್ಕೆ ರಾಜ್ಯಾಂಗ ಸ್ವಾಯತ್ತತೆ ಕೇಳಲಾಗುತ್ತಿದೆಯೇ ವಿನಃ, ಪ್ರತ್ಯೇಕ ಧರ್ಮದ ಬೇಡಿಕೆ ಅಲ್ಲ ಎಂದು ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‌ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊಡವರ ರಾಜಕೀಯ ಗುರಿ ಮತ್ತು ಆಶೋತ್ತರ ಕೊಡವ ಲ್ಯಾಂಡ್ ಅಟೋನಮಿ (ಸ್ವಾಯತ್ತೆತೆ), ಕೊಡವರ ಶ್ರೇಷ್ಠ ಹಕ್ಕೊತ್ತಾಯ, ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತರಿಯ ಬೇಡಿಕೆಯಾಗಿದೆ. ಆದರೆ ಕೆಲವರು ಕೊಡವರನ್ನು ಪ್ರತ್ಯೇಕ ಧರ್ಮ ಎಂದು ಪರಿಗಣಿಸುವಂತೆ ಬೇಡಿಕೆ ಸಲ್ಲಿಸಿರುವುದು ಸರಿಯಲ್ಲ ಎಂದು ತಿಳಿಸಿದರು.

ಅಲ್ಲದೇ ಸಮುದಾಯದ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿದ್ದು  ಮೂಲ ಕೊಡವರನ್ನು ಒಕ್ಕಲೆಬ್ಬಿಸುವ ಕೆಲಸವು ವ್ಯವಸ್ಥಿತವಾಗಿ ನಡೆಯುತ್ತಿದೆ, ನಾವೆಂದು ಪ್ರತ್ಯೇಕ ಧರ್ಮದ ಬೇಡಿಕೆಯನ್ನಿಟ್ಟಿಲ್ಲ, ಹಿಂದೂ ಧರ್ಮದ ಭಾಗವಾಗಿಯೇ ಉಳಿಯುತ್ತೇವೆ. ಆದರೆ  ಪ್ರಸ್ತುತ ವೀರಶೈವ-ಲಿಂಗಾಯಿತ ಧರ್ಮದಂತೆ ನಮ್ಮನ್ನು ಒಡೆಯುವ ತಂತ್ರವನ್ನು ರಚಿಸಿದೆ ಎಂದು ಸರ್ಕಾರವನ್ನು ದೂರಿದರು.

ಸಿಎನ್‌ಸಿಯ 28 ವರ್ಷಗಳ ಪರಿಶ್ರಮ, ತ್ಯಾಗದ ಹೋರಾಟದ ಪರಿಣಾಮ ಕೊಡವರ ಆಶೋತ್ತರ, ಕಾರ್ಯಸೂಚಿ ಮತ್ತು ಹಕ್ಕೊತ್ತಾಯವನ್ನು ಸಮಾಜದ ಮುನ್ನೆಲೆಗೆ ತರಲಾಗಿದೆ. ಆದರೆ ಕೆಲವರು ಅದನ್ನು ವಿಫಲಗೊಳಿಸಿ ದಿಕ್ಕು ತಪ್ಪಿಸುವ ಉದ್ದೇಶದಿಂದ ಕೊಡವರು ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಬಗ್ಗೆ ಕ್ಷಣ ಕಾಲ ಗೊಂದಲ ಮೂಡಿಸಿ ತಪ್ಪು ಸಂದೇಶ ರವಾನಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾರಣಿಭೂತರಾಗಿದ್ದಾರೆ. ಆದರೆ ಭೂ ಒಡೆತನ, ಆರ್ಥಿಕ ಅಭಿವೃದ್ಧಿ ಪ್ರತಿಪಾದಿಸಿಕೊಂಡು ಬಂದವರು ನಾವು. ನಮ್ಮ ಗುರಿಯತ್ತ ಇಟ್ಟ ಹೆಜ್ಜೆಯಿಂದ ವಿಮುಖರಾಗುವುದಿಲ್ಲವೆಂದು  ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ರೇಖಾ ನಾಚಪ್ಪ, ಎ.ಪಿ.ಪೂವಣ್ಣ ಇದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: