ಮೈಸೂರು

ಹನಿ ಟ್ರ್ಯಾಪಿಂಗ್: ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಂಧನ

ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಾಂಬೆ ಸಲೀಂನನ್ನು ಆತನ 6 ಮಂದಿ ಸಂಗಡಿಗರೊಂದಿಗೆ ಮಂಗಳವಾರ ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು, ಹೈದರಾಬಾದ್ ಮತ್ತು ತೆಲಂಗಾಣ ಪೊಲೀಸರು ಕೆಲ ದಿನಗಳಿಂದ ಸಲೀಂಗಾಗಿ ತೀವ್ರ ಶೋಧ ನಡೆಸುತ್ತಿದ್ದರು.

ಶ್ರೀರಂಗಪಟ್ಟಣದ ಸಮೀಪವಿರುವ ಕಾಡೊಂದರಲ್ಲಿ ಆರೋಪಿಗಳ ತಂಡ ಬೀಡುಬಿಟ್ಟಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರು ಮಂದಿಯನ್ನು ಬಂಧಿಸಿ, ಪಿಸ್ತೂಲ್ ಮತ್ತು ಇತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರೇಮ ಮತ್ತು ಖುಷಿ ಎಂಬಿಬ್ಬರು ಮಹಿಳೆಯರು ಕೂಡ ಈ ತಂಡದವರಾಗಿದ್ದು, ಖುಷಿ ಮೈಸೂರಿನ ನಿವಾಸಿಯಾಗಿದ್ದಾರೆ. ಬಾಂಬೆ ಸಲೀಂ ವಿರುದ್ಧ ದರೋಡೆ, ಹನಿ ಟ್ರ್ಯಾಪಿಂಗ್ ಸೇರಿ ಸುಮಾರು 50 ಪ್ರಕರಣಗಳು ದಾಖಲಾಗಿದ್ದವು. 15 ಮಂದಿಯ ತಂಡದಲ್ಲಿ ಸದ್ಯ 6 ಮಂದಿಯನ್ನು ಬಂಧಿಸಲಾಗಿದೆ.

ಇವರು ತಮ್ಮ ತಂಡದಲ್ಲಿದ್ದ ಹುಡುಗಿಯರನ್ನು ಬಳಸಿ ಜನರನ್ನು ಬಲೆಗೆ ಬೀಳಿಸಿ, ವಿಡಿಯೋ ಚಿತ್ರೀಕರಣ ನಡೆಸಿ ಹಣಕ್ಕಾಗಿ ಬೆದರಿಕೆಯನ್ನೊಡ್ಡುತ್ತಿದ್ದರು. ಕಳೆದ ತಿಂಗಳು ಶ್ರೀರಂಗಪಟ್ಟಣದಲ್ಲಿ ಈ ರೀತಿಯ ಪ್ರಕರಣವೊಂದು ದಾಖಲಾಗಿತ್ತು.

ಪೊಲೀಸರು ನಾಲ್ಕು ಕಾರು, ಒಂದು ಗನ್, 18 ಬುಲೆಟ್‍ಗಳು, 10 ಲಾಂಗ್, 6 ಚಾಕುಗಳು, ಕೆಂಪು ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ ಮತ್ತು ಸ್ಪ್ರೇಗಳನ್ನು ವಶಪಡಿಸಿಕೊಂಡಿದ್ದಾರೆ. ಸಬ್‍ ಇನ್ಸ್ ಪೆಕ್ಟರ್ ಪುನೀತ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ ರೆಡ್ಡಿ ಅವರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.

Leave a Reply

comments

Related Articles

error: