ಕರ್ನಾಟಕ

ಶ್ರದ್ಧಾಭಕ್ತಿಯಿಂದ ನೆರವೇರಿದ ಕೂತಿನಾಡು ಸುಗ್ಗಿ

ಸೋಮವಾರಪೇಟೆ,ಏ.9-ಇಲ್ಲಿಗೆ ಸಮೀಪದ ಶಾಂತಳ್ಳಿ ಹೋಬಳಿಯ ನಗರಳ್ಳಿ ಗ್ರಾಮದ ಐತಿಹಾಸಿಕ ಕೂತಿನಾಡು ಸುಗ್ಗಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗ್ರಾಮ ಸುಭೀಕ್ಷೆಗೆ ಪೂಜೆ ಹಾಗೂ ಮಳೆ, ಬೆಳೆ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸುಮಾರು 400 ವರ್ಷಗಳ ಇತಿಹಾಸವಿರುವ ಸುಗ್ಗಿ ಉತ್ಸವವನ್ನು ಈ ವರ್ಷವೂ ಕ್ರಮಬದ್ಧವಾಗಿ ನಡೆಸಿದ ಗ್ರಾಮಸ್ಥರು, ಅತಿಥಿಗಳಿಗೆ ವಿಶೇಷ ಗೌರವ ಸಲ್ಲಿಸಿದರು. ಗ್ರಾಮದ ನಿವಾಸಿಗಳು, ಮಹಿಳೆಯರು, ಮಕ್ಕಳು, ಹಿರಿಯರು ಉತ್ಸವದಲ್ಲಿ ಭಾಗವಹಿಸಿ ಗ್ರಾಮದೇವತೆಗೆ ಇಷ್ಟಾರ್ಥಗಳ ನೆರವೇರಿಕೆಗೆ ಪ್ರಾರ್ಥಿಸಿದರು. ಅದರಲ್ಲೂ ಕುಟುಂಬ ಸಮೇತ ತವರಿನ ಸುಗ್ಗಿಯಲ್ಲಿ ಹೆಣ್ಣು ಮಕ್ಕಳು ಭಾಗವಹಿಸಿ, ದೇವಿಗೆ ಹರಕೆ ಸಲ್ಲಿಸಿದರು. ಭಕ್ತಾದಿಗಳ ಆಕರ್ಷಣೆಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸುಗ್ಗಿ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿತ್ತು.

ಬೆಳಿಗ್ಗೆ ಸುಗ್ಗಿಬನದ ಸಮೀಪವಿರುವ ಬಿಲ್ಲ ರಂಗದಲ್ಲಿ ಪೂರ್ವಜರ ಜೀವನ ಪದ್ಧತಿಯನ್ನು ಬಿಂಬಿಸುವ ನೃತ್ಯ ಪ್ರಾಕಾರ, ಬಿಲ್ಲುಬಾಣಗಳನ್ನು ಹಿಡಿದು ಸಾಂಕೇತಿಕವಾಗಿ ಬೇಟೆಯಾಡುವ ಪ್ರಸಂಗ, ಕಡವೆಯ ಪಾತ್ರಧಾರಿಯನ್ನು ಅಟ್ಟಿಸಿಕೊಂಡು ಹೋಗುವ ಬೇಟೆಗಾರರ ತಂಡದ ಸದಸ್ಯರಿಗೆ ಕಡವೆ ಒದೆಯುವ ದೃಶ್ಯ ಮನಮೋಹಕವಾಗಿತ್ತು.
ಕೊನೆಯಲ್ಲಿ ಕಡವೆ ಕಾಡು ಸೇರುವ ಮೂಲಕ, ಬೇಟೆಗಾರರಿಂದ ಬಚಾವಾಗುವ ದೃಶ್ಯ, ಸಾಂಪ್ರದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ಗ್ರಾಮದ ಹಿರಿಯರು, ಬಿಲ್ಲರಂಗದಲ್ಲಿ ಪ್ರದರ್ಶನ ಹಾಕುತ್ತ, ಮಲೆನಾಡು ಸುಗ್ಗಿ ಇತಿಹಾಸವನ್ನು ನೆರದಿದ್ದವರಿಗೆ ತಿಳಿಸುತ್ತಿದ್ದರು.

ಸುಗ್ಗಿ ಕುಣಿತ, ಸುಗ್ಗಿ ಹಾಡುವುದು, ಬಿಲ್ಲು ತೂಗುವುದು ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನಡೆದವು.
ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪೂಜೆ ನೆರವೇರಿಸಿದರು.

ಸುಗ್ಗಿ ಕಟ್ಟೆಯ ಮುಖ್ಯ ರಂಗದಲ್ಲಿ ಈಡುಗಾಯಿ ಒಡೆಯಲಾಯಿತು. ಭಕ್ತಾದಿಗಳಿಗೆ ಅನ್ನಸಂರ್ಪಣೆ ನಡೆಯಿತು. ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷ ಕೆ.ಟಿ.ಜೋಯಪ್ಪ, ಕೂತಿ ಗ್ರಾಮಾಧ್ಯಕ್ಷ ಪರಮೇಶ್, ಉಪಾಧ್ಯಕ್ಷ ಎನ್.ಕೆ.ಪ್ರಕಾಶ್, ಕಾರ್ಯದರ್ಶಿ ಎನ್.ಬಿ.ಧರ್ಮಪ್ಪ, ಖಜಾಂಚಿ ಎಲ್.ಪಿ.ಈರಪ್ಪ, ಪ್ರಮುಖರಾದ ಎಚ್.ಪಿ.ಗೋಪಾಲ ಸುಗ್ಗಿಯ ಉಸ್ತುವಾರಿ ವಹಿಸಿದ್ದರು.

ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಮಯದಲ್ಲಿ ಕೃಷಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಬಾರದು, ಉತ್ತಮ ಮಳೆಯಾಗಿ ಗ್ರಾಮ ಸುಭೀಕ್ಷೆಯಿಂದಿರಬೇಕು, ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಕ್ಕೆ ಸುಗ್ಗಿ ಉತ್ಸವಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ ಎಂದರು. (ಕೆಸಿಐ, ಎಂ.ಎನ್)

Leave a Reply

comments

Related Articles

error: