ಮೈಸೂರು

ಸಂಕುಚಿತ ಮನೋಭಾವದಿಂದ ಮಾನವೀಯ ಮೌಲ್ಯಗಳು ಅಧೋಗತಿಗೆ ಹೋಗುತ್ತಿವೆ : ಪ್ರೊ.ಸಿ ಬಸವರಾಜು

ಮೈಸೂರು,ಏ.10:- ನಮ್ಮಲ್ಲಿರುವ ಸಂಕುಚಿತ ಮನೋಭಾವದಿಂದ ಮಾನವೀಯ ಮೌಲ್ಯಗಳು ಅಧೋಗತಿಗೆ ಹೋಗುತ್ತಿವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ ಬಸವರಾಜು ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಡಾ.ಬಾಬೂ ಜಗಜ್ಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ವತಿಯಿಂದ  ಮಾನಸಗಂಗೋತ್ರಿಯ ಡಾ.ಬಾಬೂ ಜಗಜ್ಜೀವನರಾಮ್ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿಂದು ಜಗಜ್ಜೀವನ್ ರಾಮ್ ಅವರ 111ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ ‘ಜಗಜ್ಜೀವನ್ ರಾಮ್ ಅವರ ಚಿಂತನೆಗಳ ಪ್ರಸ್ತುತತೆ’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಒಬ್ಬ ಮಹಾನ್ ಪುರುಷನ ಸಾಮಾಜಿಕ ಪರಿವರ್ತನೆ, ಚಿಂತನೆಗಳ ಕುರಿತು ಚರ್ಚೆಯಾಗಬೇಕು ಎಂದರು. ದಲಿತ ಸಮುದಾಯದ ಎರಡು ನಕ್ಷತ್ರಗಳೆಂದರೆ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬೂ ಜಗಜ್ಜೀವನ್ ರಾಮ್ ಇವರಿಬ್ಬರನ್ನೂ ಮುಖ್ಯ ಚರ್ಚೆಗೆ ಒಳಪಡಿಸುವುದಾದರೆ ಅವರ ಚಿಂತನೆ, ಮಾರ್ಗದರ್ಶನ, 21ನೇ ಶತಮಾನದಲ್ಲಿ ಹೆಚ್ಚು ಪ್ರಸ್ತುತ.ಮೂಲಭೂತವಾಗಿ ಸಾಮಾಜಿಕ ಆಂದೋಲನವನ್ನು ಸಮಾಜದಲ್ಲಿ ಪ್ರತಿಪಾದನೆ ಮಾಡಿದ ವ್ಯಕ್ತಿತ್ವ. ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಸಮಾಜದಿಂದ ಹೊರಗೆ ಬಂದು ಪ್ರತಿಪಾದನೆ ಮಾಡಿದರು. ಬಾಬು ಜಗಜ್ಜೀವನ್ ರಾಮ್ ಈ ಪರಿಸ್ಥಿತಿಯಲ್ಲಿಯೇ ಇದ್ದು ಪ್ರತಿಪಾದನೆ ಮಾಡಿದರು. ಇವರಿಬ್ಬರ ಪರಿಕಲ್ಪನೆಯೂ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂಬುದಾಗಿತ್ತು ಎಂದರು. ಬಾಬು ಜಗಜ್ಜೀವನ್ ರಾಮ್ ಐಕ್ಯತೆ ಇದ್ದಲ್ಲಿ ಸ್ವಾತಂತ್ರ್ಯ ಗಳಿಸಲು ಸಾಧ್ಯ. ಸ್ವಾತಂತ್ರ್ಯವಿದ್ದಲ್ಲಿ ಆರ್ಥಿಕ ಸ್ವಾವಲಂಬನೆ ಪಡೆಯಬಹುದು ಎಂದು ಹೇಳಿದ್ದರು. ಶೋಷಿತ ಸಮುದಾಯಕ್ಕೆ ಬೆಳಕು ನೀಡಿದ್ದರು. ಇಂದು ಮೌಲ್ಯಗಳು ಅಧೋಗತಿಗೆ ಹೋಗುತ್ತಿವೆ. ಗೌರವ ಭಾವನೆ ಕ್ಷೀಣಿಸುತ್ತಿದೆ. ಹೃದಯ ಶ್ರೀಮಂತಿಕೆ ದೂರವಾಗುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಸಂಕುಚಿತ ಮನೋಭಾವ. ನಾವೀಗ 21ನೇ ಶತಮಾನದಲ್ಲಿದ್ದರೂ ವಿಜ್ಞಾನ-ತಂತ್ರಜ್ಞಾನಗಳಲ್ಲಿ ಮುಂದುವರಿದರೂ ಮಾನವೀಯ ಮೌಲ್ಯದಲ್ಲಿ ಮಾತ್ರ ಹಿಂದೆ ಹೋಗುತ್ತಿದ್ದೇವೆ. ಸಂವಿಧಾನದ ಆಶಯಕ್ಕೆ ಸ್ಪಂದಿಸಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಬಾಬು ಜಗಜ್ಜೀವನ್ ರಾಮ್ ಕೂಡ ಅದನ್ನೇ ಹೇಳಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ದಲಿತರಿಗೆ ಬಂದಿಲ್ಲ ಎಂದವರು. ಹಸಿರು ಕ್ರಾಂತಿಯ ಮೂಲಕ ರೈತರ ಹಕ್ಕು ಪ್ರತಿಪಾದನೆಗೆ ಜಾಗೃತಿ ಮೂಡಿಸಿದರು. ಶಿಕ್ಷಣ ಸಾರ್ವತ್ರಿಕ  ಶಿಕ್ಷಣವಾಗಬೇಕು. ಕೆಲವೇ ವರ್ಗದವರಿಗೆ ಮಾತ್ರ ಶಿಕ್ಷಣ ಸೀಮಿತವಾಗಿದೆ. ಬ್ರಿಟಿಷರು ಭಾರತಕ್ಕೆ ಬರದಿದ್ದಲ್ಲಿ ದಲಿತರು ಈ ಮಟ್ಟಕ್ಕೆ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲವೇನೋ ಎಂದರು. ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳು ನಿಲ್ಲಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವೆ ಡಿ.ಭಾರತಿ, ಡಾ.ಬಾಬೂ ಜಗಜ್ಜೀವನ್ ರಾಮ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ, ಸಂದರ್ಶಕ ಪ್ರಾಧ್ಯಾಪಕ ಪ್ರೊ.ಜಿ.ರಾಮರತನ್, ಪ.ಜಾತಿ/ಪ.ವರ್ಗಗಳ ವಿಶೆಷ ಘಟಕ ುಪಕುಲಸಚಿವ ಡಾ.ಎಸ್.ಮಹದೇವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: