ಮೈಸೂರು

ಕನ್ನಡನಾಡು ಕಂಡ ಅಪರೂಪದ ಸಾಹಿತಿ, ಮಾನವತವಾದಿ ಡಾ. ಪ್ರಭುಶಂಕರ : ಡಾ. ಹೆಚ್.ಆರ್. ತಿಮ್ಮೇಗೌಡ

ಮೈಸೂರು,ಏ.10:-  ಸಂತ ಕವಿ, ವಿಮರ್ಶಕ, ಮಹಾಜನ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಡಾ. ಪ್ರಭುಶಂಕರ ಅವರಿಗೆ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂತಾಪ ಸಭೆಯನ್ನು ಏರ್ಪಡಿಸಲಾಗಿತ್ತು.

ಇಂದು ನಡೆದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್.ಆರ್. ತಿಮ್ಮೇಗೌಡ ಡಾ. ಪ್ರಭುಶಂಕರ ಅವರು ಕುವೆಂಪು ಅವರ ಪ್ರೀತಿಯ ಶಿಷ್ಯರು. ಒಳ್ಳೆಯ ವಿಮರ್ಶಕರು, ಅನುವಾದಕರು, ಉತ್ತಮ ವಾಗ್ಮಿಗಳು, ಯಾವುದೇ ವಿಷಯವನ್ನು ಹಾಸ್ಯದ ನೆಲೆಯಿಂದಲೇ ನಿರೂಪಿಸುವ ಹಾಸ್ಯ ಪ್ರವೀಣರು. ಇವರ ದಾಂಪತ್ಯ ಜೀವನ ಇಂದಿನ ಲೋಕಕ್ಕೆ ಮಾರ್ಗದರ್ಶಿಯಾದದ್ದು. ಯಾರ ಮನಸ್ಸನ್ನು ನೋಯಿಸದ ಗುಣ ಹೊಂದಿದ್ದ ಡಾ. ಪ್ರಭುಶಂಕರ ಅವರು ಘನತೆ ಮತ್ತು ಗೌರವವನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದವರಾಗಿದ್ದರು.  ಕುವೆಂಪು ಅವರು ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಪ್ರಭುಶಂಕರ ಅವರು ಉತ್ತಮವಾದ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ ಅವರ ಪ್ರಭಾವವನ್ನು ಎಂದು ಸ್ವಾರ್ಥಕ್ಕಾಗಿ ಬಳಸಿಕೊಂಡವರಲ್ಲ. ತಮಗೆ ದಕ್ಕಬೇಕಾಗಿದ್ದ ಪ್ರಾಧ್ಯಾಪಕ ಹುದ್ದೆ ಬೇರೆಯವರ ಪಾಲಾದ ಸಂದರ್ಭದಲ್ಲೂ ಕುವೆಂಪು ಅವರೊಂದಿಗೆ ಸಂಬಂಧವನ್ನು ಕಳೆದುಕೊಂಡವರಲ್ಲ. ಇದು ಅವರ ಗುರುಭಕ್ತಿಗೆ ಆತ್ಮಾಭಿಮಾನಿಯಾದ ಅವರ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ. ಅವರ ನಿರ್ಲಿಪ್ತ ಮನಸ್ಸು ನಮಗೆ ಮಾದರಿಯಾಗಿದೆ. ಪ್ರಭುಶಂಕರ ಅವರು ಬದುಕಿನ ಕೊನೆಯವರೆಗೂ ಸ್ನೇಹ ಜೀವಿಯಾಗಿ ಬಾಳಿದವರು. ಬದುಕಿನಲ್ಲಿ ಬಂದ ನೋವುಗಳನ್ನು ನಗುವಿನಲ್ಲಿ ಕಳೆದವರೆಂದು ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಲೋಕಕ್ಕೆ ಡಾ. ಪ್ರಭುಶಂಕರ ಅವರ ಕೊಡುಗೆ ಅಪಾರವೆಂದು ಅವರ ಸಾಹಿತ್ಯದ ಪರಿಚಯವನ್ನು ಮಾಡಿಕೊಟ್ಟರು.

ಪ್ರಾಂಶುಪಾಲರಾದ ಡಾ. ಎಸ್. ವೆಂಕಟರಾಮು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಶೈಕ್ಷಣಿಕ ಸಲಹೆಗಾರರಾದ ಡಾ. ಎಸ್.ಆರ್. ರಮೇಶ್, ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಭಾಗವಹಿಸಿ ಡಾ. ಪ್ರಭುಶಂಕರ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. (ಎಸ್.ಎಚ್)

Leave a Reply

comments

Related Articles

error: