ಪ್ರಮುಖ ಸುದ್ದಿಮೈಸೂರು

ಟಿಕೆಟ್ ಹಂಚಿಕೆಯಾದಾಕ್ಷಣದಿಂದಲೇ ಕಾಂಗ್ರೆಸ್ ಸರ್ವ ನಾಶ ಆರಂಭ : ಮಧು ಬಂಗಾರಪ್ಪ

ಮೈಸೂರು,ಏ.10 :  ಟಿಕೆಟ್ ಘೋಷಣೆಯಾಗಲಿ ಕಾಂಗ್ರೆಸ್ ಸರ್ವನಾಶ ಅಲ್ಲಿಂದ ಆರಂಭವಾಗುತ್ತೆ. ಕಾಂಗ್ರೆಸಿಗೆ ಹೊರಗಿನ ವಿರೋಧಿಗಳೇ ಬೇಕಿಲ್ಲ,  ಟಿಕೆಟ್ ಗಾಗಿ ಈಗಾಗಲೆ ಕಿಡಿ ಹೊತ್ತಿದ್ದು ನಂತರದ ದಿನಗಳಲ್ಲಿ ಧಗಧಗಿಸುವುದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಭವಿಷ್ಯ ನುಡಿದರು.

ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿರುವುದು ಉದ್ರೀ ಸರ್ಕಾರ, ಸಾಲದ ಸುಳಿಯಲ್ಲಿ ಮುಳುಗಿದೆ, ಘೋಷಣೆಯಾದ ರೈತ ಸಾಲಮನ್ನಾ ಇನ್ನೂ ಬಾಕಿ ಇದೆ, ನಿರುದ್ಯೋಗ ಸಮಸ್ಯೆ, ಸಾವಿರಾರು ಉದ್ಯೋಗಗಳು ಖಾಲಿ ಇರುವ ಶಿಕ್ಷಣ ಕ್ಷೇತ್ರವೂ ಅಧೋಗತಿಗಿಳಿದಿದೆ, ಬಿಜೆಪಿ ಕೋಮುವಾದಿಯಾದರೆ ಕಾಂಗ್ರೆಸ್ ಪರೋಕ್ಷ ಕೋಮುವಾದಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ, ಕಾಂಗ್ರೆಸ್ ‌ನವರು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಗಳು ಬಾಕಿ ಇರುವಾಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತದೆ, ಜೆಡಿಎಸ್  ಅಭ್ಯರ್ಥಿಗಳು ಪ್ರಚಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗೂ ಗಮನಹರಿಸಿದ್ದಾರೆ.  ಬಿಜೆಪಿಯವರು ನಿನ್ನೆ ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.  ಕಾಂಗ್ರೆಸ್ ನವರು ಮೊದಲಿನಿಂದಲೂ ಕೊನೆ ಕ್ಷಣದಲ್ಲೇ ಟಿಕೆಟ್ ಘೋಷಣೆ ಮಾಡ್ತಾರೆ.  ನನ್ನ ತಂದೆಯವರೂ ಅದನ್ನೂ ಅನುಭವಿಸಿದ್ದಾರೆ. ಟಿಕೆಟ್ ಗಾಗಿ ಎರಡು ಪಕ್ಷಗಳಲ್ಲಿ ಈಗಾಗಲೇ ಕಿತ್ತಾಟ ಆರಂಭವಾಗಿದೆ ಇದಲ್ಲದೆ, ಈ ಬಾರಿ ಜೆಡಿಎಸ್‌ಗೆ ಅತಿ ಕಡಿಮೆ ಸ್ಥಾನ ದೊರೆಯಲಿದೆ ಎಂಬ ಸಿಎಂ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿ, ಯಾರು ಎಷ್ಟು ಸೀಟು ಗೆಲ್ಲುತ್ತಾರೆಂಬುದನ್ನು ಜನ ನಿರ್ಧರಿಸಲಿದ್ದಾರೆಂದರು.

ವಿರೋಧ ಪಕ್ಷದಲ್ಲಿರುತ್ತೇವೆ : ಈಗಾಗಲೇ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ದುರಾಡಳಿತದಿಂದ ಜನ ಬೇಸತ್ತಿದ್ದು ಬದಲಾವಣೆ ಬಯಸಿದ್ದಾರೆ. ಅದರಂತೆ ಮಧ್ಯ ಕರ್ನಾಟಕ, ಮೈಸೂರು ಪ್ರಾಂತ್ಯ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದ್ದು ಸುಮಾರು 80-85 ರಷ್ಟು ಸ್ಥಾನಗಳನ್ನು ಪಡೆಯಲಿದ್ದೇವೆ,.ಒಂದೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಾಗದೇ ಇದ್ದರೆ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ರೆಡಿ ಇದ್ದೇವೆ.  ಕಾಂಗ್ರೆಸ್, ಬಿಜೆಪಿಯವರಿಗೆ ಇದೇ ಮಾತನ್ನು ಹೇಳಲು ಶಕ್ತಿ ಇದೆಯಾ ಎಂದು ಪ್ರಶ್ನಿಸಿ. ರಾಜ್ಯದ 224 ಕ್ಷೇತ್ರಗಳಲ್ಲೂ ಯಾರೊಂದಿಗೂ ಮೈತ್ರಿಯಿಲ್ಲ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಅಂತ ಹೇಳಿದ್ದೇವೆ. ತಾಕತ್ತಿದ್ದರೆ ಕಾಂಗ್ರೆಸ್, ಬಿಜೆಪಿಯವರೂ ಘೋಷಣೆ ಮಾಡಲಿ ಎಂದು ಸವಾಲೆಸೆದರು.

ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಮಾತನಾಡಿದಾಕ್ಷಣ ಮತಗಳು ಬರುವುದಿಲ್ಲ, ರಾಜ್ಯದ ಬಗ್ಗೆ ಕಾಳಜಿಯಿದಿದ್ದರೆ ಮಹದಾಯಿ ಮತ್ತು ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಮಧ್ಯ ಪ್ರವೇಶಿಸಿಬೇಕು, ಆದರ ಹೊರತಾಗಿ ಕೇವಲ ವಿರೋಧಿಗಳ ದೋಷರೋಪ ನಡೆಸಲೆಂದೇ ರಾಜ್ಯಕ್ಕೆ ಬರುವಂತಾಗಿದೆ ಎಂದು ದೂರಿದರು.

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರ ಬೇಟಿ ಸೌಜನ್ಯಕ್ಕೆ, ಹಿರಿಯರಾದ  ಅವರ ಮಾರ್ಗದರ್ಶನ ಪಡೆದಿರುವ ಎಂದು ಸ್ಪಷ್ಟಪಡಿಸಿದರು.

ನಗರಾಧ್ಯಕ್ಷ ಚಲುವೇಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯ ದೇವರಾಜ್, ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ ಅಜೀಜ್ ಅಬ್ದುಲ್, ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಕೆ.ವಿ.ಮಲ್ಲೇಶ್, ನಗರಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು ಗೋಷ್ಠಿಯಲ್ಲಿ ಇದ್ದರು.(ವರದಿ : ಕೆ.ಎಂ.ಆರ್)

Leave a Reply

comments

Related Articles

error: