ಕರ್ನಾಟಕ

ಬಿಡಿಎ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ: ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಸ್ಪಂದಿಸಿ

ಬೆಂಗಳೂರು (ಏ.11): ಬಿಡಿಎ ವಿರುದ್ಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತ್ವರಿತ ವಿಲೇವಾರಿಗೆ ಪೂರಕವಾಗಿ ಪ್ರಾಧಿಕಾರದ ಪರವಾಗಿ ವಾದಿಸುತ್ತಿರುವ ವಕೀಲರಿಗೆ ಅಗತ್ಯ ಮಾಹಿತಿ ಹಾಗೂ ಆಕ್ಷೇಪಣೆ ಸಲ್ಲಿಸಲು ಕಾರ್ಯತಂತ್ರ ರೂಪಿಸಲು ನೆರವಾಗುವಂತೆ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಕೆ.ನಾರಾಯಣಪುರ ಗ್ರಾಮದ ಎಚ್‌.ಎಂ.ಸುಬ್ರಮಣಿ ಎಂಬುವರು ಸಲ್ಲಿಸಿರುವ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರನ್ನು ಒಳಗೊಂಡ ಪೀಠವು, ಪ್ರಕರಣದ ವಿಚಾರಣೆಯಲ್ಲಿ ಬಿಡಿಎ ಪರ ವಕೀಲರಿಂದ ಸೂಕ್ತ ಸಹಕಾರ ದೊರೆಯದಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿತು.

ಬಿಡಿಎ ಆಯುಕ್ತರು ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನ್ಯಾಯಲಯ ನಿರ್ದೇಶನ ನೀಡಿತ್ತು. ಅದರಂತೆ ಮಂಗಳವಾರ ಆಯುಕ್ತ ರಾಕೇಶ್ ಸಿಂಗ್ ನ್ಯಾಯಪೀಠದ ಮುಂದೆ ಹಾಜರಿದ್ದರು. ಬಿಡಿಎ ವಿರುದ್ಧ ದಾಖಲಾಗಿರುವ ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು ವಕೀಲರಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಇದರಿಮದಲೇ ಹಲವು ಪ್ರಕರಣಗಳಲ್ಲಿ ವರ್ಷಗಳಿಂದ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ. ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಹಿಡಿಯಬೇಕಾಗಿದೆ ಎಂದು ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ.

ಕೋರ್ಟ್ ನೀರ್ದೇಶನಕ್ಕೆ ತಕ್ಷಣ ಸ್ಪಂದಿಸಿರುವ ಬಿಡಿಎ ಆಯುಕ್ತರು, ಇನ್ನುಮುಂದೆ ಪ್ರಕರಣಗಳ ಶಿಘ್ರ ವಿಲೇವಾರಿಗೆ ಎಲ್ಲ ರೀತಿಯ ಸಹಕಾರವನ್ನು ವಕೀಲರಿಗೆ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ಹೇಳಿಕೆ ನೀಡಿದ್ದಾರೆ. (ಎನ್.ಬಿ)

Leave a Reply

comments

Related Articles

error: