ಮೈಸೂರು

ಒಂದೇ ಟಿಕೇಟ್ ನಿಂದ ಎಲ್ಲವನ್ನೂ ವೀಕ್ಷಿಸುವ ಅವಕಾಶ: ಡಿ. ರಂದೀಪ್

ಮೈಸೂರನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರು ಇನ್ನು ಮುಂದೆ ಒಂದೇ ಟಿಕೇಟ್ ಕೊಂಡು ಎಲ್ಲವನ್ನೂ ವೀಕ್ಷಿಸುವ ಯೋಜನೆ ಜನವರಿಯಲ್ಲಿಯೇ ಸಿದ್ಧಗೊಳ್ಳಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ.ಡಿ.ರಂದೀಪ್ ತಿಳಿಸಿದರು.

ಅರಮನೆ ಆವರಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಅರಮನೆ, ಮೃಗಾಲಯ, ಕಾರಂಜಿಕೆರೆ, ಚಾಮುಂಡಿಬೆಟ್ಟಗಳನ್ನು ಇನ್ನು ಒಂದೇ ಟಿಕೇಟ್ ಕೊಂಡು ನೋಡಬಹುದಾಗಿದೆ. ಇಂತಹ ಒಂದು ಯೋಜನೆಯನ್ನು ರೂಪಿಸಿಕೊಡಲು ಬೆಂಗಳೂರು ಮೂಲದ ಬುಕ್ ಮೈಶೋಗೆ ಜವಾಬ್ದಾರಿ ವಹಿಸಲಾಗಿದೆ ಎಂದರು. ಜನವರಿ 1ರಿಂದ ಸಿಂಗಲ್ ಟಿಕೆಟ್ ಸಿಸ್ಟಮ್ ಜಾರಿಗೆ ಬರಲಿದ್ದು, ಪ್ರವಾಸಿಗರಿಗೆ ನಾಲ್ಕು ಸ್ಥಳಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುವ ಸಮಸ್ಯೆ ಇರುವುದಿಲ್ಲ ಎಂದು  ತಿಳಿಸಿದರು.

ಒಂದು ಟಿಕೆಟ್ ಬೆಲೆ 108 ರೂ. ಆಗಿದ್ದು , ಹಿರಿಯ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿ ದರ ನೀಡಲಾಗುವುದು. ಪ್ರಾಯೋಗಿಕವಾಗಿ ಜನವರಿಯಿಂದ  ಮೂರು  ತಿಂಗಳವರೆಗೆ ಈ ನಿಯಮ ಜಾರಿಗೆ  ತರಲಾಗುವುದು ಎಂದು ರಂದೀಪ್ ಹೇಳಿದರು.

ಎಪ್ರಿಲ್ ನಲ್ಲಿ ಇ-ಟಿಕೇಟ್ ಬಿಡುಗಡೆಗೊಳಿಸಲಾಗುವುದು ಅದಕ್ಕೆ ಸರ್ಕಾರದ ಅನುಮತಿಯೂ ದೊರಕಿದೆ. ಈ ಮೂಲಕ ವಿವಿಧ ಪ್ರವಾಸಿತಾಣಗಳನ್ನು ಗುರುತಿಸುವ ಕೆಲಸವಾಗಲಿದೆ ಎಂದರು. ಕರ್ನಾಟಕ ಮೃಗಾಲಯ ಪ್ರಾಧಿಕಾರ, ಧಾರ್ಮಿಕ ದತ್ತಿ ಇಲಾಖೆ, ಅರಮನೆ ಆಡಳಿತ ಮಂಡಳಿ ವೈಯುಕ್ತಿಕವಾಗಿ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಕಮಲಾ ಕರಿಕಾಳನ್, ಅರಮನೆ ಆಡಳಿತ ಮಂಡಳಿಯ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಚಾಮುಂಡಿ ದೇವಳದ ಅಧಿಕಾರಿ ಪ್ರಸಾದ್ ಉಪಸ್ಥಿತರಿದ್ದರು.

Leave a Reply

comments

Related Articles

error: