ಪ್ರಮುಖ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಲಿನ ಭೀತಿ ಎದುರಾಗಿದೆ :ಯಡಿಯೂರಪ್ಪ ಟೀಕೆ

ರಾಜ್ಯ(ಬೆಂಗಳೂರು)ಏ.12:- ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಬೇಕೆಂಬ ಸಂಕಲ್ಪ ಮಾಡಿದ್ದಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಲಿನ ಭೀತಿಯುಂಟಾಗಿದ್ದು, ಬೇರೆ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಬಿಜೆಪಿ ಚುನಾವಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಚಾಮುಂಡೇಶ್ವರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ಗೆಲ್ಲಲಾರದೇ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಾಮುಂಡೇಶ್ವರಿ ಮತ್ತು ಅವರ ಮಗ ನಿಲ್ಲಲಿರುವ ಕ್ಷೇತ್ರ ವರುಣಾ ದಲ್ಲಿ ಕಾಂಗ್ರೆಸ್ ಸೋಲಿಸಲು ಎಲ್ಲ ರೀತಿಯಲ್ಲಿಯೂ ರಣತಂತ್ರ ರೂಪಿಸಲಾಗಿದೆ ಎಂದರು.

ಕರ್ನಾಟಕದಲ್ಲೂ ಕೂಡ ಉತ್ತರ ಪ್ರದೇಶದಂತೆ ಚುನಾವಣಾ ಫಲಿತಾಂಶ ಬರಲಿದೆ. ಕೇಂದ್ರ ಉತ್ತಮ ಸಹಕಾರ ನೀಡುತ್ತಿದೆ. ಹಿಂದಿನ ಯಾವ ಚುನಾವಣೆಯಲ್ಲಿಯೂ ಕೇಂದ್ರ ಸರ್ಕಾರದಿಂದ  ಇಂಥಹ ಉತ್ತಮ ಸಹಕಾರ ಸಿಕ್ಕಿರಲಿಲ್ಲ ಎಂದರು. ಇದೇ ವೇಳೆ ಅವರು ಬೆಂಗಳೂರಿನಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ’ನವ ಬೆಂಗಳೂರಿನಿಂದ ನವ ಭಾರತ ನಿರ್ಮಾಣ’ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿನ ಅಭಿವೃದ್ಧಿಯ ಕುರಿತಾದ ವಿವಿಧ ಸವಾಲುಗಳಿಗೆ ಉತ್ತರಿಸಿದ ಅವರು ಕಳೆದ 5 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗಿದೆ. ಪ್ರಧಾನಿ ಮೋದಿಯವರ ನವಭಾರತದ ನಿರ್ಮಾಣಕ್ಕೆ ಪೂರಕವಾಗಿ ನವಬೆಂಗಳೂರು ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ. ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಹೇಳಿದರು. ನಟಿ ಮಾಳವಿಕ ಅವಿನಾಶ್ ಸೇರಿದಂತೆ ಅನೇಕ ಯುವಕ ಯುವತಿಯರು ಚರ್ಚೆಯಲ್ಲಿ ಭಾಗವಹಿಸಿದ್ದರು. (ಎಸ್.ಎಚ್)

Leave a Reply

comments

Related Articles

error: