ಮೈಸೂರು

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಂದ ವಲಯ-3-7 ಪರಿಶೀಲನೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ .ಡಿ.ಧೃವಕುಮಾರ್ ವಲಯ-3 ಮತ್ತು 7ರ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಿಗೆ  ಬುಧವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ವಿಜಯನಗರ 4ನೇ ಹಂತ, 2ನೇ ಫೇಸ್ ಬಡಾವಣೆಯಲ್ಲಿ ಪ್ರಾಧಿಕಾರದವತಿಯಿಂದ ನಿರ್ಮಿಸಲಾಗಿರುವ ಹೈಟೆಕ್ ಸ್ಮಶಾನದ ಎದುರು ಇರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ್ದು, ಅಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವುದನ್ನು ಗಮನಿಸಿ ಅತೀ ಶೀಘ್ರವಾಗಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬೋರ್‍ವೆಲ್ ಕೊರೆಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ಹಾಗೂ ಈ ರಸ್ತೆಯಲ್ಲಿ ಬರುವ ಬೀದಿ ದೀಪಗಳನ್ನು ಪ್ರತಿ ದಿನವೂ ಸಂಜೆಯ ವೇಳೆಯಲ್ಲಿ ಬೆಳಗಿಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯನಗರ 4ನೇ ಹಂತ, 2ನೇ ಫೇಸ್, ಬಡಾವಣೆಯ ನಿವಾಸಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದ ಮಹಿಳೆಯರು ಈ ಬಡಾವಣೆಯಲ್ಲಿ ತಾವು ಅನುಭವಿಸುತ್ತಿರುವ ನೀರಿನ ವ್ಯವಸ್ಥೆಯು ಸಮರ್ಪಕವಾಗಿಲ್ಲದಿರುವ ಬಗ್ಗೆ ಹಾಗೂ ನಮಗೆ ನೀರು ಒಂದು ವಾರವಾದರೂ ಬರುತ್ತಿಲ್ಲ, ಇಲ್ಲಿನ ರಸ್ತೆಯು ಹಾಳಾಗಿದ್ದು, ಧೂಳಿನ ಸಮಸ್ಯೆಯ ಹೆಚ್ಚಾಗಿದೆ ಎಂದರು.

ಬಡಾವಣೆಯ ನಿವಾಸಿಗಳ ಮನವಿಯಂತೆ ಸ್ಥಳ ಪರಿಶೀಲನೆ ಮಾಡಿ ಅತೀ ತುರ್ತಾಗಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗೂ ಇಲ್ಲಿನ ರಸ್ತೆಯ ಸಮಸ್ಯೆಯನ್ನು ಸಹ ಬಗೆಹರಿಸಲು ಕ್ರಮವಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯನಗರ 4ನೇ ಹಂತ, 2ನೇ ಫೇಸ್ ಬಡಾವಣೆಯಲ್ಲಿ ಹೂಟಗಳ್ಳಿ ಕೆ.ಹೆಚ್.ಬಿ ಕಾಲೋನಿಗೆ ಹೊಂದಿಕೊಂಡಂತೆ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಓವರ್‍ಹೆಡ್ ಟ್ಯಾಂಕ್ ಇರುವ ಪ್ರದೇಶದ ಎದುರು ಖಾಲಿ ಇರುವ ಜಾಗದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಂಥಾಲಯ ನಿರ್ಮಿಸಿಕೊಡುವುದಾಗಿ ಅಲ್ಲಿನ ನಿವಾಸಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಈ ಜಾಗವನ್ನು ಕ್ರೀಡಾ ಚಟುವಟಿಕೆಗಳಿಗಾಗಿ ಅಭಿವೃದ್ಧಿಪಡಿಸಿಕೊಡಬೇಕಾಗಿ ಮನವಿಯನ್ನು ಮಾಡಿಕೊಂಡರು. ಅಲ್ಲಿನ ನಿವಾಸಿಗಳಿಗೆ ಈ ಸಂಬಂಧ ಒಂದು ಮನವಿ ಪತ್ರವನ್ನು ಸಲ್ಲಿಸುವಂತೆ ತಿಳಿಸಿದರು.

ಲಿಂಗಾಂಬುಧಿ ಗ್ರಾಮದಲ್ಲಿ ಮೈಸೂರು ಜಿಲ್ಲಾ ಎಂಪ್ಲಾಯೀಸ್ ಗೃಹ ನಿರ್ಮಾಣ ಸಹಕಾರ ಸಂಘದವರು ನಿರ್ಮಿಸಿರುವ ವಸತಿ ಬಡಾವಣೆಗೆ ಅಧ್ಯಕ್ಷರು ಭೇಟಿ ನೀಡಿದ ಸಂದರ್ಭದಲ್ಲಿ ಈ ಖಾಸಗಿ ಬಡಾವಣೆಯ ನಿವಾಸಿಗಳು ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಬೀದಿ ದೀಪಗಳು ಇಲ್ಲದೆ ತೊಂದರೆಯಾಗಿರುವ ಬಗ್ಗೆ ಮತ್ತು ಇಲ್ಲಿಗೆ ಸಾರಿಗೆ ವ್ಯವಸ್ಥೆಯು ಇಲ್ಲದಿರುವ ಬಗ್ಗೆ ಮನವಿ ಮಾಡಿಕೊಂಡರು.

ಸದರಿ ಬಡಾವಣೆಯಲ್ಲಿ ನೀರಿನ ಟ್ಯಾಂಕನ್ನು ಖಾಸಗಿ ಬಡಾವಣೆಯವರು ನಿರ್ಮಿಸಿರುವುದನ್ನು ಗಮನಿಸಿ ಸದ್ಯಕ್ಕೆ ಈ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಅಭಿವೃದ್ಧಿದಾರರನ್ನು ಸಂಪರ್ಕಿಸಿ ಟ್ಯಾಂಕಿನಿಂದ ನೀರನ್ನು ಸರಬರಾಜು ಮಾಡಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಇಲ್ಲಿನ ನಿವಾಸಿಗಳು ಓಡಾಡಲು ಅನುಕೂಲವಾಗುವಂತೆ ಬೀದಿ ದೀಪಗಳ ಸೌಕರ್ಯವನ್ನು ಕಲ್ಪಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಈ ಬಡಾವಣೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು

ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯ ಭಾಸ್ಕರ್ ಎಲ್ ಗೌಡ,  ಕಾರ್ಯಪಾಲಕ ಅಭಿಯಂತರ  ಬಿ.ಎನ್.ಪ್ರಭಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಹೇಮಂತ್ ಕುಮಾರ್,  ಟಿ.ಕೆ.ರವಿ ಮತ್ತಿತರರು ಜೊತೆಗಿದ್ದರು.

Leave a Reply

comments

Related Articles

error: