ಕರ್ನಾಟಕ

ಮತ ಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಚಾಲನೆ

ಮಂಡ್ಯ (ಏ.12): ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಇಂದು ಜಿಲ್ಲೆಯ ಮತದಾರರಲ್ಲಿ ನೈತಿಕ, ನ್ಯಾಯಸಮ್ಮತ, ಕಡ್ಡಾಯ ಮತದಾನ ಹಾಗೂ ಇತರೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ “ಮತ ಜಾಗೃತಿ ರಥ” ವಾಹನಕ್ಕೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಅವರು ಮಂಗಳವಾರ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ಜಿಲ್ಲಾ ಮತದಾರರ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ ಸಮಿತಿ ವತಿಯಿಂದ ವಿಶೇಷವಾಗಿ ವಾಹನಗಳನ್ನು ವಿನ್ಯಾಸಗೊಳಿಸಿ “ಮತ ಜಾಗೃತಿ ರಥ” ಎಂದು ಹೆಸರಿಸಲಾಗಿದೆ. ಈ ವಾಹನಗಳು ಮಂಡ್ಯ ಜಿಲ್ಲೆಯ ವಿಧಾನ ಸಭಾ ಕ್ಷೇತ್ರವಾರು ಬರುವ ಎಲ್ಲಾ ಮತಗಟ್ಟೆ ಪ್ರದೇಶಗಳಲ್ಲಿ ಸಂಚಾರ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.

ಮತದಾನ ಖಾತರಿ ಪಡಿಸುವ ಯಂತ್ರ ವಿವಿಪ್ಯಾಟ್, ವಿದ್ಯುನ್ಮಾನ ಮತಯಂತ್ರ, ನೈತಿಕ ಮತದಾನ ಸೇರಿದಂತೆ ಮತದಾನಕ್ಕೆ ಸಂಬಂಧಿಸಿದ ಹಲವು ವಿಷಯಗಳ ಮಾಹಿತಿ ವಿನ್ಯಾಸದಲ್ಲಿ ಪ್ರದರ್ಶಿಸಲಾಗಿದೆ ಎಂದ ಜಿಲ್ಲಾಧಿಕಾರಿಯವರು ವಾಹನದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಶ್ರವಣ ಸಂದೇಶವನ್ನು ಧ್ವನಿವರ್ಧಕದ ಮೂಲಕ ತಿಳಿಸಲು ವ್ಯವಸ್ಥೆ ಮಾಡಲಾಗಿದೆ ಹಾಗೂ ಮತದಾನದ ಜಾಗೃತಿ ಸಂದೇಶವಿರುವ ಕರ ಪತ್ರಗಳನ್ನು ಮತದಾರರಲ್ಲಿ ವಿತರಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಮತದಾರರ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ ಸಮಿತಿ (ಸ್ವೀಪ್) ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶರತ್, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಸ್ವೀಪ್ ಜಿಲ್ಲಾ ನೋಡಲ್ ಅಧಿಕಾರಿ ರಾಮಕೃಷ್ಣ, ಸಹಾಯಕ ನೋಡಲ್ ಅಧಿಕಾರಿ ಶಾಂತ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದರು.(ಎನ್.ಬಿ)

Leave a Reply

comments

Related Articles

error: