
ಮೈಸೂರು
ಬೈಲಕುಪ್ಪೆ: ದೇವಾಲಯದಲ್ಲಿ ನೀರಿನ ಸೌಲಭ್ಯವಿಲ್ಲದೆ ಬವಣೆ
ವರದಿ: ಬಿ.ಆರ್. ರಾಜೇಶ್
ಬೈಲಕುಪ್ಪೆ: ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ವಿಠಲ್ ಆರೋಪಿಸಿದ್ದಾರೆ.
ತಾಲೂಕಿನ ಚಿಕ್ಕಹೊನ್ನೂರು ಗ್ರಾಮದ ಸಮೀಪವಿರುವ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದ ಬೆಟ್ಟ ಹಾಗೂ ಆಂಜನೇಯಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಈ ಸಮಸ್ಯೆ ಎದುರಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಮತ್ತು ಆಳರಸರ ಇತಿಹಾಸ ಸಾರುವ ಸುಮಾರು 800 ವರ್ಷಗಳ ಹಿಂದಿನ ದೇವಾಲಯ ಎನ್ನಲಾದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಮತ್ತು ಆಂಜನೇಯಸ್ವಾಮಿ ದೇವಾಲಯಕ್ಕೆ ಬರುವ ಭಕ್ತರು ಪ್ರತಿ ಶನಿವಾರ ಹಾಗೂ ವರ್ಷಕ್ಕೊಮ್ಮೆ ನಡೆಯುವ ಕಾರ್ತಿಕ ಮಾಸದ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಕುಡಿಯುವ ನೀರಿಗೆ ಬವಣೆಪಡುವಂತಾಗಿದೆ.
“ಪ್ರತಿ ಬುಧವಾರ ಮತ್ತು ಶನಿವಾರ ದೇವಾಲಯದಲ್ಲಿ ಪೂಜೆ ಕೈಂಕರ್ಯ ನಡೆಯುವುದರಿಂದ ನೂರಾರು ಭಕ್ತರು ಆಗಮಿಸುತ್ತಾರೆ. ಕುಡಿಯುವ ನೀರು ಮತ್ತು ಹರಕೆ ಸಲ್ಲಿಸುವುದು – ಮುಂತಾದ ಕಾರ್ಯಗಳಿಗೆ ನೀರಿನ ಸೌಲಭ್ಯವಿಲ್ಲದೆ ತೊಂದರೆಪಡುವಂತಾಗಿದೆ”.
ರಂಗನಾಥ್, ಕಾರ್ಯದರ್ಶಿ
ಭಕ್ತರ ಅನುಕೂಲಕ್ಕಾಗಿ ಇಲ್ಲಿನ ರೈತ ಸ್ವಾಮಿ ಎಂಬುವವರ ಜಮೀನಿನಿಂದ ತಾತ್ಕಾಲಿಕವಾಗಿ ಕೊಳವೆ ಬಾವಿಗಳ ಮೂಲಕ ನೀರು ಪಡೆಯಲಾಗುತ್ತಿದ್ದು, ಜಿಲ್ಲಾ ಪಂಚಾಯಿತಿ ವತಿಯಿಂದ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸಲು ವರ್ಷದ ಹಿಂದೆ ಕೊಳವೆ ಬಾವಿ ತೊಡಿಸಲಾಗಿದ್ದು, ಮೋಟರ್ ಸಹ ಅಳವಡಿಲಾಗಿದೆ.
ಆದರೆ ಟ್ರಾನ್ಸ್`ಫಾರ್ಮರ್ ಮೂಲಕ ಯಾವುದೇ ರೀತಿ ವಿದ್ಯುತ್ ಸಂಪರ್ಕ ನೀಡಿಲ್ಲ. ಅಲ್ಲದೇ ಸ್ವಿಚ್ ಬೋರ್ಡ್ ಅಳವಡಿಸಿಲ್ಲ. ಇದರಿಂದ ಪೈಪ್ಲೈನ್ ಕಾರ್ಯ ಮತ್ತು ಕೊಳವೆ ತೋಡಿಸುವ ಕೆಲಸ ಮುಗಿದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶ್ರೀರಂಗನಾಥಸ್ವಾಮಿ ಸೇವಾ ಟ್ರಸ್ಟ್ ಕಾರ್ಯದರ್ಶಿಯಾದ ರಂಗನಾಥ್, ತಮ್ಮಣ್ಣ, ಗ್ರಾ.ಪಂ. ಸದಸ್ಯ ರಾಮು ಸಹ ದೂರುತ್ತಿದ್ದಾರೆ.
“ಪ್ರತಿವರ್ಷ ನಡೆಯುವ ಕಡೆಯ ಕಾರ್ತಿಕ ಮಾಸದ ಕೊನೆಯ ಶನಿವಾರದಂದು ಅಧಿಕಾರಿಗಳು ಒಮ್ಮೆ ಭೇಟಿ ನೀಡಿದರೆ ಇಲ್ಲಿನ ಅಗತ್ಯಗಳು ಅವರಿಗೆ ಮನವರಿಕೆಯಾಗುತ್ತವೆ”.
ರಾಮು ಜಿ, ಗ್ರಾ.ಪಂ. ಸದಸ್ಯ
ಈ ಬಗ್ಗೆ ಜಿ.ಪಂ. ಎಂಜಿನಿಯರ್ ಉಪ ವಿಭಾಗದ ಸಹಾಯಕ ಎಂಜಿನಿಯರ್ ಪ್ರಭುರವರನ್ನು ಪ್ರಶ್ನಿಸಿದರೆ ನಮ್ಮಿಂದಾಗುವ ಕೆಲಸವನ್ನು ನಾವು ಮುಗಿಸಿದ್ದೇವೆ. ಉಳಿದ ಕೆಲಸವನ್ನು ಗ್ರಾ.ಪಂ. ವತಿಯಿಂದ ಮತ್ತು ಸೆಸ್ಕಾಂ ವತಿಯಿಂದ ಆಗಬೇಕಿದೆ ಎಂದು ಉತ್ತರಿಸುತ್ತಿದ್ದು, ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಿದರೆ “ನಮಗೆ ಹಸ್ತಾಂತರ ಮಾಡಿಕೊಟ್ಟಿಲ್ಲ” ಎಂದು ಸಬೂಬು ಹೇಳುತ್ತಿದ್ದಾರೆ ಎಂದು ದೂರುತ್ತಾರೆ.
ಬೈಲಕುಪ್ಪೆ ಗ್ರಾ.ಪಂ. ವ್ಯಾಪ್ತಿಗೆ ಸೇರಿರುವುದರಿಂದ ಇಲ್ಲಿನ ಅಭಿವೃದ್ಧಿ ಅಧಿಕಾರಿ ಶಿವಯೋಗರವರನ್ನು ಸಂಪರ್ಕಿಸಿದಾಗ ಜಿ.ಪಂ. ಉಪವಿಭಾಗದ ವತಿಯಿಂದ ಇಲ್ಲಿನ ಕೆಲಸ ಕಾರ್ಯ ಅರ್ಧದಷ್ಟಾಗಿದ್ದು, ಇನ್ನುಳಿದ ಕೆಲಸಗಳಿರುವುದರಿಂದ ನಮ್ಮ ಸುಪರ್ದಿಗೆ ಪಡೆಯಲು ಆಗುವುದಿಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.
ಆದ್ದರಿಂದ ಜಿಲ್ಲಾಡಳಿತವು ಇದರ ಬಗ್ಗೆ ಗಮನ ಹರಿಸಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಸೇವಾ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.